ಬೆಂಗಳೂರು,ಮಾ 06 (DaijiworldNews/MS): ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರ ಅಳಿಯ ಡಾ. ಸಿಎನ್ ಮಂಜುನಾಥ್ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ಅಂತಿಮವಾಗಿದೆ. ಕಾಂಗ್ರೆಸ್ ಹಾಲಿ ಸಂಸದ ಡಿ.ಕೆ ಸುರೇಶ್ ಅವರ ಕ್ಷೇತ್ರವಾಗಿರುವ ಬೆಂಗಳೂರು ಗ್ರಾಮಾಂತರದಿಂದ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಉಭಯ ಪಕ್ಷದ ನಾಯಕರು ಈ ವಿಚಾರವಾಗಿ ಮಂಗಳವಾರ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ನಿವಾಸದಲ್ಲಿ ಸಮಾಲೋಚನೆ ನಡೆಸಿದ್ದು, ಸಭೆಯಲ್ಲಿ ಮಾಜಿ ಸಚಿವರಾದ ಸಿಪಿ ಯೋಗೆಶ್ವರ್, ಮುನಿರತ್ನ, ಶಾಸಕ ಎಂ ಕೃಷ್ಣಪ್ಪ, ನಿಖಿಲ್ ಕುಮಾರಸ್ವಾಮಿ ಸೇರಿ ಉಭಯ ಪಕ್ಷಗಳ ನಾಯಕರು ಭಾಗಿಯಾಗಿದ್ದಾರೆ.ಸಭೆಯಲ್ಲಿ ಬಿಜೆಪಿ ನಾಯಕರೇ ಮಂಜುನಾಥ್ ಹೆಸರು ಪ್ರಸ್ತಾಪ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಟಿಕೆಟ್ ಆಕಾಂಕ್ಷಿಯಾಗಿರುವ ಸಿಪಿ ಯೋಗಿಶ್ವರ್ ಅವರಿಂದಲೂ ಡಾ. ಮಂಜುನಾಥ್ ಸ್ಪರ್ಧೆಗೆ ಒಲವು ವ್ಯಕ್ತವಾಗಿದೆ.
ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಸದ್ಯ ನಾವು ಯಾವುದೇ ನಿರ್ಧಾರ ತಳೆಯುವುದು ಬೇಡ. ಬಿಜೆಪಿ ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿ ಎನ್ಡಿಎ ಅಭ್ಯರ್ಥಿ ಗೆಲುವಿಗೆ ಜೊತೆಯಾಗಿ ಕೆಲಸ ಒಗ್ಗಟ್ಟಿನಿಂದ ಹೋರಾಟ ಮಾಡುವ ಎಂದಿದ್ದಾರೆ.