ಬೆಂಗಳೂರು, ಮಾ06(DaijiworldNews/AK): ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ಮೂವರನ್ನು ಬಂಧಿಸಿರುವುದು ಸರಿ. ಆದರೆ, ಎಫ್ಎಸ್ಎಲ್ ವರದಿಯನ್ನು ಯಾಕಿನ್ನೂ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಅವರು ಪ್ರಶ್ನಿಸಿದರು.
ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಂಧಿತರು ಯಾರೋ ಚೇಲಾಗಳಿರಬೇಕು ಅಂದುಕೊಂಡಿದ್ದೆವು. ಅವರಿಗೆ ರಾಹುಲ್ ಗಾಂಧಿಯವರ ಸಂಪರ್ಕ ಇರುವುದು ನಮಗೆ ಗೊತ್ತಿರಲಿಲ್ಲ ಎಂದು ತಿಳಿಸಿದರು.
ಈಗ ರಾಹುಲ್ ಗಾಂಧಿಯವರ ಜೊತೆಗಿರುವ, ತಬ್ಬಿಕೊಂಡಿರುವ ಫೋಟೊ ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನ ಜಿಂದಾಬಾದ್ ನಂಟು ನಾವು ಅಂದುಕೊಂಡಿದ್ದ ರೀತಿಯನ್ನೂ ಮೀರಿದೆ. ಪಾಕಿಸ್ತಾನದ ಅಪ್ಪ, ಅಮ್ಮನಿಗೆ ಹುಟ್ಟಿದ ದೇಶದ್ರೋಹಿಗಳು ಕೂಗಿದ್ದಾರೆ ಎಂದುಕೊಂಡಿದ್ದೆವು. ದೇಶದ್ರೋಹಿಗಳಿಗೂ ಕಾಂಗ್ರೆಸ್ ನಾಯಕರಿಗೂ ಅಪ್ಪುಗೆಯ ನಂಟಿದೆ ಎಂದು ನಮಗೆ ತಿಳಿದಿರಲಿಲ್ಲ ಎಂದು ವಿಶ್ಲೇಷಿಸಿದರು.
ಅಪ್ಪುಗೆಯ ನಂಟೂ ಇರುವ ಕಾರಣ ಎಫ್ಎಸ್ಎಲ್ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲವೇನೋ ಎಂದು ಅವರು ಸಂಶಯ ವ್ಯಕ್ತಪಡಿಸಿದರು. ಎಫ್ಎಸ್ಎಲ್ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲು ಅವರು ಆಗ್ರಹಿಸಿದರು.
ಅಧಿಕೃತವಾಗಿ ಎಫ್ಎಸ್ಎಲ್ ವರದಿಯನ್ನು ಬಿಡುಗಡೆ ಮಾಡಬೇಕಿತ್ತಲ್ಲವೇ? ಸಚಿವ ಪ್ರಿಯಾಂಕ್ ಖರ್ಗೆಯವರು ಘಟನೆ ನಡೆದ ಮರುದಿನವೇ ‘ಅವರು ಹಾಗೆ ಕೂಗಿಲ್ಲ; ಪಾಕಿಸ್ತಾನ ಜಿಂದಾಬಾದ್ ಎಂದು ಇಲ್ಲವೇ ಇಲ್ಲ’ ಎಂದಿದ್ದರು. ವರದಿ ಸಿಕ್ಕಿದ್ದರೂ ಸರಕಾರ ಅಧಿಕೃತವಾಗಿ ಅದನ್ನು ಬಿಡುಗಡೆ ಮಾಡಿಲ್ಲವೇಕೆ? ಎಂದು ಕೇಳಿದರು.