ನವದೆಹಲಿ,ಏ 29 (Daijiworld News/MSP): ಮತದಾನ ಮಾಡಿದ ಗುರುತಿಗಾಗಿ ಹಾಗೂ ನಕಲಿ, ಡಬಲ್ ವೋಟಿಂಗ್ ತಪ್ಪಿಸುವ ಸಲುವಾಗಿ ಪ್ರತಿ ಚುನಾವಣೆಯಲ್ಲೂ ಮತದಾನ ಮಾಡಿದ ನಂತರ ಮತದಾರರ ಕೈಬೆರಳಿಗೆ ಮತದಾನದ ಗುರುತಿಗಾಗಿ ಕೆಲದಿನಗಳ ಕಾಲ ಅಳಿಸಲಾಗದ ಶಾಯಿ ಹಾಕಲಾಗುತ್ತದೆ. ಆದರೆ ಇದೀಗ ಮತದಾರರಿಗೆ ಚುನಾವಣಾ ಆಯೋಗ ಹಾಕುತ್ತಿರುವ ಶಾಯಿಯ ಗುಣಮಟ್ಟದ ಬಗ್ಗೆ ವಿವಾದ ಹುಟ್ಟಿಕೊಂಡಿದೆ.
ಏ.29 ರ ಸೋಮವಾರ ದೇಶದ ಹಲವೆಡೆ 4ನೇ ಹಂತದ ಮತದಾನದ ನಡೆಯುತ್ತಿದ್ದರೆ, ಮತ್ತೊಂದೆಡೆ ಅಳಿಸಲಾಗದ ಶಾಯಿಯ ಬಗ್ಗೆಯೂ ತೀವ್ರವಾಗಿ ಚರ್ಚೆ ಪ್ರಾರಂಭವಾಗಿದೆ. ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಅವರು ನೈಲ್ ಪಾಲಿಶ್ ರಿಮೂವರ್ ಬಳಸಿ ಸುಲಭದಲ್ಲಿ ಕೈ ಬೆರಳಿನಲ್ಲಿದ್ದ ವೋಟಿಂಗ್ ಇಂಕ್ ಅಳಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಮಾತ್ರವಲ್ಲ ಕೈ ಬೆರಳಿನಲ್ಲಿದ್ದ ಶಾಯಿ ಅಳಿಸಿದ್ದಕ್ಕೆ ಸಾಕ್ಷಿಯಾಗಿ ಫೋಟೋ ಕೂಡ ಅಪ್ಲೋಡ್ ಮಾಡಿದ್ದಾರೆ. ಕೇವಲ ಇವರು ಮಾತ್ರವಲ್ಲದೆ ಹಲವು ಈ ಪ್ರಯೋಗವನ್ನು ಮಾಡಿದ್ದು, ಚುನಾವಣಾ ಶಾಹಿ ಗುಣಮಟ್ಟ ಎಷ್ಟು ನಿಜ ಎಂದು ಪ್ರಶ್ನಿಸತೊಡಗಿದ್ದಾರೆ.
ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಕೂಡಾ ಇತ್ತೀಚೆಗೆ, ಮತದಾನ ಮಾಡಿದ ಕೆಲವೇ ಗಂಟೆಗಳಲ್ಲಿ ಶಾಯಿ ಗುರುತು ನಾಪತ್ತೆಯಾಗಿದೆ. ಸ್ನಾನ ಮಾಡಿದ ತಕ್ಷಣ ಮತದಾನ ಮಾಡಿದ ಇಂಕ್ ಕಣ್ಮರೆಯಾಗಿರೋದು ಅಚ್ಚರಿ ಮೂಡಿಸಿದೆ ಎಂದಿದ್ದರು.
ಈ ಬಾರಿಯ ಲೋಕಸಭಾ ಚುನಾವಣೆಗಾಗಿ ಚುನಾವಣಾ ಆಯೋಗ ಸುಮಾರು 33 ಕೋಟಿ ರೂ ವೆಚ್ಚದಲ್ಲಿ 26 ಲಕ್ಷ ಬಾಟಲ್ ಇಂಕ್ ಗಳನ್ನು ತರಿಸಿಕೊಂಡಿದೆ. ಶಾಯಿ ತಯಾರಿಸುವ ಏಕೈಕ ಕಂಪನಿಯಾದ ಮೈಸೂರಿನಲ್ಲಿರುವ ಕರ್ನಾಟಕ ಸರ್ಕಾರಿ ಸ್ವಾಮ್ಯದ ಮೈಸೂರ್ ಪೇಂಟ್ಸ್ ಆ್ಯಂಡ್ ವಾರ್ನಿಷ್ ಲಿ.ಗೆ ಚುನಾವಣಾ ಆಯೋಗಕ್ಕೆ ಶಾಯಿ ಪೂರೈಸಿದೆ. 1951ರಿಂದಲೂ ಆಯೋಗ ಇದೇ ಇಂಕ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದು 1962ರಲ್ಲಿ ಕೇಂದ್ರ ಚುನಾವಣಾ ಆಯೋಗವು ಮೈಸೂರ್ ಪೇಂಟ್ಸ್ ಜೊತೆ ಅಳಿಸಲಾಗದ ಶಾಯಿ ಪೂರೈಕೆಗೆ ಒಪ್ಪಂದ ಮಾಡಿಕೊಂಡಿತ್ತು.
ಮೈಸೂರು ಪೇಂಟ್ಸ್, ಕೇವಲ ಭಾರತೀಯ ಚುನಾವಣಾ ಆಯೋಗಕ್ಕೆ ಮಾತ್ರವಲ್ಲದೇ ಅಮೆರಿಕ ಸೇರಿದಂತೆ ವಿಶ್ವದ 26 ದೇಶಗಳಿಗೆ ಅಳಿಸಲಾಗದ ಇಂಕ್ ಅನ್ನು ಪೂರೈಸುತ್ತಿದೆ.