ಬೆಂಗಳೂರು, ಮಾ06(DaijiworldNews/AA): ಮತೀಯ ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನಿಷ್ಠ ಇಂತಿಷ್ಟು ವಿದ್ಯಾರ್ಥಿಗಳನ್ನು ಹೊಂದಿರಬೇಕು ಎಂಬ ಷರತ್ತನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ರದ್ದುಗೊಳಿಸಲು ಮುಂದಾಗಿದೆ ಎನ್ನಲಾಗಿದೆ.
ಈವರೆಗೆ ಜಾರಿಯಲ್ಲಿದ್ದ ಷರತ್ತನ್ನು ರದ್ದುಪಡಿಸುವ ಬಗ್ಗೆ ಸೂಕ್ತ ಆದೇಶ ಹೊರಡಿಸಲು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಹಾಗೂ ವಕ್ಫ್ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾಪವನ್ನು ಸಲ್ಲಿಸಿದೆ.
ಅಲ್ಪಸಂಖ್ಯಾತ ಸಮುದಾಯಗಳ ಶೇ. 25ರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿದಲ್ಲಿ ಅಂತಹ ಶಿಕ್ಷಣ ಸಂಸ್ಥೆಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವುದಾಗಿ ಕರಡು ಅಧಿಸೂಚನೆಯನ್ನು 2018ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಹೊರಡಿಸಿತ್ತು. ಇದಕ್ಕೆ ಸಚಿವ ಸಂಪುಟದಲ್ಲಿ ವಿರೋಧವೂ ವ್ಯಕ್ತವಾಗಿತ್ತು. ಆದರೆ ಇದೀಗ ಮತ್ತೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಈ ಷರತ್ತನ್ನು ರದ್ದುಗೊಳಿಸಲು ಮುಂದಾಗಿದೆ.
ಅಲ್ಪಸಂಖ್ಯಾತರ ಸಮುದಾಯದ ಶಿಕ್ಷಣ ಸಂಸ್ಥೆಗಳನ್ನು ಘೋಷಿಸಲು ಇರುವ 2/3 ರಷ್ಟು ಆಡಳಿತ ಮಂಡಳಿ ಸದಸ್ಯರನ್ನು ಹೊಂದಿರಬೇಕು ಎಂಬ ಷರತ್ತನ್ನು ಸರ್ಕಾರ ರದ್ದು ಮಾಡಿಲ್ಲ. ಬದಲಾಗಿ ಶೇಕಡ ಇಂತಿಷ್ಟು ವಿದ್ಯಾರ್ಥಿಗಳು ಇರಬೇಕೆಂಬ ಷರತ್ತನ್ನು ಮಾತ್ರ ರದ್ದುಗೊಳಿಸಲು ಸರ್ಕಾರ ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರ ಸಂಸ್ಥೆಗಳನ್ನಾಗಿ ಘೋಷಿಸಲು ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ, ಆರೋಗ್ಯ ಕುಟುಂಬ ಕಲ್ಯಾಣ, ತಾಂತ್ರಿಕ ಶಿಕ್ಷಣ ಇಲಾಖೆಗಳಲ್ಲಿ ವಿಭಿನ್ನ ರೀತಿಯ ಷರತ್ತುಗಳನ್ನು ವಿಧಿಸಿದೆ. ಇನ್ನು ವಿವಿಧ ಇಲಾಖೆಗಳು ವಿಧಿಸಿರುವಂತಹ ಈ ಷರತ್ತುಗಳು, ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ತೊಡಕಾಗಿತ್ತು. ಇನ್ನು ಅಲ್ಪಸಂಖ್ಯಾತರ ಸಂಸ್ಥೆಗಳನ್ನಾಗಿ ಘೋಷಿಸಲು ತೊಡಕಾಗಿರುವ ಷರತ್ತುಗಳನ್ನು ರದ್ದುಗೊಳಿಸಿ ಏಕರೂಪತೆ ತರಲು ಸರ್ಕಾರ ನಿರ್ಧಾರ ಮಾಡಿದೆ ಎನ್ನಲಾಗಿದೆ.