ನವದೆಹಲಿ, ಮಾ 11 (DajiworldNews/AKJ): ಕೇಂದ್ರ ಸರ್ಕಾರ ಅಧಿಕೃತವಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲು ಸನ್ನದ್ಧವಾಗಿದೆ. ಇಂದು ರಾತ್ರಿಯೇ ಸಿಎಎ ಜಾರಿ ಸಂಬಂಧ ನಿಯಮಗಳನ್ನು ಪ್ರಕಟಿಸಿ ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಈ ಹಿಂದಿನ ಚುನಾವಣೆಯ ವೇಳೆ ಸಿಎಎ ಜಾರಿಗೊಳಿಸುತ್ತೇವೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ರಾಷ್ಟ್ರಪತಿಗಳು ಕಾಯ್ದೆಗೆ ಅಂಕಿತ ಹಾಕಿದ್ದರೂ ಕೂಡ ಇಲ್ಲಿಯವರೆಗೆ ಜಾರಿ ಆಗಿರಲಿಲ್ಲ. ಈಗ ಲೋಕಸಭಾ ಚುನಾವಣೆಗೂ ಮುನ್ನ ಸಿಎಎ ಜಾರಿಗೊಳಿಸುವ ಮೂಲಕ ತನ್ನಲ್ಲಿದ್ದ ದೊಡ್ಡ ಅಸ್ತ್ರವನ್ನು ಬಿಜೆಪಿ ಪ್ರಯೋಗಿಸಲಿದೆ. ಎಂದು ಮೂಲಗಳಿಂದ ತಿಳಿದು ಬಂದಿದೆ.
ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ನಮ್ಮ ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲಾಗುತ್ತಿದೆ. ಕಾಯ್ದೆಯಲ್ಲಿ ಯಾವುದೇ ನಿಬಂಧನೆ ಇಲ್ಲದ ಕಾರಣ ಸಿಎಎ ಯಾರ ಪೌರತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಸಿಎಎ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವ ನೀಡುವ ಕಾಯ್ದೆಯಾಗಿದೆ.
2019ರಲ್ಲಿ ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳು ಸಹಿ ಹಾಕಿದ ನಂತರ ದೇಶದಲ್ಲಿ ಭಾರೀ ಪ್ರತಿಭಟನೆ ನಡೆಯಿತು .ಈ ಕಾರಣದಿಂದ ಸಿಎಎ ಜಾರಿಯಾಗಿಲ್ಲ. ಈ ಕಾಯ್ದೆಯ ಪ್ರಕಾರ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಿಂದ ಬರುವ ಹಿಂದೂ, ಸಿಖ್, ಜೈನ್, ಕ್ರೈಸ್ತ ಮತ್ತು ಬೌದ್ಧ ಸಮುದಾಯದವರಿಗೆ ಭಾರತದ ಪೌರತ್ವ ನೀಡಲಾಗುತ್ತದೆ.