ಲಖನೌ, ಎ30(Daijiworld News/SS): ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಎದುರಾಳಿಯಾಗಿ, ವಜಾಗೊಂಡ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಕಣಕ್ಕೆ ಇಳಿದಿದ್ದಾರೆ.
ಬಿಜೆಪಿಯ ರಾಷ್ಟ್ರೀಯವಾದ ಅಸ್ತ್ರಕ್ಕೆ ಪ್ರತ್ಯಸ್ತ್ರ ಹೂಡಿರುವ ಸಮಾಜವಾದಿ ಪಕ್ಷ, ಯೋಧ ತೇಜ್ ಬಹದ್ದೂರ್ ಯಾದವ್ ಅವರನ್ನು ಮೋದಿ ವಿರುದ್ಧ ಕಣಕ್ಕೆ ಇಳಿಸಿದೆ. ನಾಮಪತ್ರ ಸಲ್ಲಿಕೆ ಸಮಯ ಕೊನೆಗೊಳ್ಳುವ ಕೆಲವೇ ಕ್ಷಣಗಳ ಮೊದಲು ತೇಜ್ ಬಹದ್ದೂರ್ ಉಮೇದುವಾರಿಕೆ ಸಲ್ಲಿಸಿದರು.
ಯೋಧ ತೇಜ್ ಬಹದ್ದೂರ್ ಯಾದವ್ ಈ ಹಿಂದೆ ಬಿಎಸ್ಎಫ್ನಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಕುರಿತು ಬಹದ್ದೂರ್ ಆರೋಪ ಮಾಡಿದ್ದರು.
ಮೋದಿ ಅವರ ಎದುರಾಳಿಯಾಗಿ ಶಾಲಿನಿ ಯಾದವ್ ಅವರನ್ನು ಎಸ್ಪಿ ಘೋಷಿಸಿತ್ತು. ಕಾಂಗ್ರೆಸ್ನಿಂದ ಬಂದಿದ್ದ ಅವರ ಸ್ಪರ್ಧೆಗೆ ಸ್ಥಳೀಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಯೋಧ ತೇಜ್ ಬಹದ್ದೂರ್ ಯಾದವ್ ಅವರನ್ನು ಮೋದಿ ವಿರುದ್ಧ ಕಣಕ್ಕೆ ಇಳಿಸಿದೆ.
ಈ ಹಿಂದೆ ಕಳಪೆ ಆಹಾರದ ವಿರುದ್ಧ ದನಿ ಎತ್ತಿದ್ದ ಬಹದ್ದೂರ್, ಬಳಿಕ ಸ್ವಯಂ ನಿವೃತ್ತಿಗೆ ಅರ್ಜಿ ಹಾಕಿದ್ದರು. ಬಿಎಸ್ಎಫ್ ನಿರಾಕರಿಸಿತ್ತು. ಇದನ್ನು ಅವರು ಪ್ರತಿಭಟಿಸಿದ್ದರು. ಅಶಿಸ್ತಿನ ಕಾರಣ ನೀಡಿ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.
ಫೌಜಿ ಏಕ್ತಾ ಕಲ್ಯಾಣ್ ಮಂಚ್ (ಎನ್ಜಿಒ), ಸೇನೆ ಹಾಗೂ ಅರೆಸೇನಾಪಡೆಯ ಹಲವು ನಿವೃತ್ತ ಸೈನಿಕರು ಬಹದ್ದೂರ್ ಪರ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.