ಬೆಂಗಳೂರು, ಮಾ 12(DaijiworldNews/AK):ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಮಾಡಲು ರಾಜಕೀಯ ಪಕ್ಷಗಳು ಹರಸಾಹಸ ಪಡುತ್ತಿದ್ದಾರೆ. ಇತ್ತ ಕಾಂಗ್ರೆಸ್ ರಾಜ್ಯದ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಸದ್ಯದಲ್ಲೇ ಇಂದು ಅಥವಾ ನಾಳೆ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಇನ್ನು ರಾಜ್ಯದಲ್ಲಿ ಹೆಚ್ಚು ಕುತೂಹಲ ಕೆರಳಿಸಿರುವ ಉಡುಪಿ -ಚಿಕ್ಕಮಗಳೂರು ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಲು ಸಂಸದೆ ಶೋಭಾ ಕರಂದ್ಲಾಜೆ ರೆಡಿಯಾಗಿದ್ದಾರೆ.. ಇದರ ನಡುವೆ ಗೋ ಬ್ಯಾಕ್ ಶೋಭಾ ಅಭಿಯಾನದ ಮೂಲಕ ಶೋಭಾ ವಿರುದ್ಧ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಇದರಿಂದ ಶೋಭಾಗೆ ವಿರೋಧಿಗಳ ಬಿಸಿ ತಟ್ಟಿದೆ.
ಮತ್ತೊಂದೆಡೆ ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದಿರುವ ಪ್ರಮೋದ್ ಮಧ್ವರಾಜ್ ಕೂಡಾ ಟಿಕೆಟ್ ನನಗೆ ಸಿಗಲಿದೆ ಎಂಬ ಭರವಸೆಯಲ್ಲಿ ಇದ್ದಾರೆ.ಇತ್ತ ಚಿಕ್ಕಮಗಳೂರಿನಲ್ಲಿ ವಿಧಾನಸಭೆಯಲ್ಲಿ ಸೋತಿರುವ ಸಿ.ಟಿ ರವಿ ಕೂಡಾ ಸ್ವಕ್ಷೇತ್ರದಲ್ಲಿ ಲೋಕಸಭೆಗೆ ಸ್ಪರ್ಧಿಸುವ ಹುಮ್ಮಸ್ಸಿನಿಂದ ಇದ್ದಾರೆ.
ಈ ನಡುವೆ ಬಿಜೆಪಿ ಹೈಕಮಾಂಡ್ ಅಚ್ಚರಿಯ ಅಭ್ಯರ್ಥಿಗೆ ಮಣೆ ಹಾಕಲಿದೆ ಎನ್ನಲಾಗಿದೆ. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟು ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಉಡುಪಿ-ಚಿಕ್ಕಮಗಳೂರಿನಲ್ಲಿ ಕಣಕ್ಕಿಳಿಸಬಹುದು ಎಂದು ಸುದ್ದಿಇದೆ. ಅದೇನೇ ಇರಲಿ ಇನ್ನೆರಡು ದಿನದಲ್ಲಿ ಅಭ್ಯರ್ಥಿಗಳ ಚಿತ್ರಣ ಹೊರ ಬೀಳಲಿದೆ.