ನವದೆಹಲಿ, ಮಾ 12(DaijiworldNews/AA): ಸುಪ್ರೀಂ ಕೋರ್ಟ್ ನ ಆದೇಶದಂತೆ ಚುನಾವಣಾ ಬಾಂಡ್ ಪಡೆದವರ ವಿವರವನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಎಸ್ಬಿಐ ಇಂದು ಸಲ್ಲಿಸಿದೆ.
ಚುನಾವಣಾ ಬಾಂಡ್ ಗಳ ವಿವರಗಳನ್ನು ಮಾ. 12 ರ ಸಂಜೆಯ ಒಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಎಸ್ಬಿಐಗೆ ಸುಪ್ರೀಂ ಸೋಮವಾರ ಸೂಚನೆ ನೀಡಿತ್ತು. ಜೊತೆಗೆ ಎಸ್ಬಿಐ ಸಲ್ಲಿಸಿದ ಈ ಮಾಹಿತಿಯನ್ನು ಮಾರ್ಚ್ 15ರ ಸಂಜೆ 5ರೊಳಗೆ ಚುನಾವಣಾ ಆಯೋಗವು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸುವಂತೆ ಸುಪ್ರೀಂ ಹೇಳಿದೆ.
ಚುನಾವಣಾ ಬಾಂಡ್ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ಸಮಯವನ್ನು ವಿಸ್ತರಿಸುವಂತೆ ಎಸ್ಬಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿತ್ತು. ಈ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ನಡೆಸಿತ್ತು.