ಚಂಡೀಗಢ, ಮಾ 13(DaijiworldNews/AA): ಹರಿಯಾಣದ ಮಾಜಿ ಸಿಎಂ ಮನೋಹರ್ಲಾಲ್ ಖಟ್ಟರ್ ಅವರು ಬುಧವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.
ಮನೋಹರ್ಲಾಲ್ ಖಟ್ಟರ್ ಅವರು ಹರಿಯಾಣ ಮುಖ್ಯಮಂತ್ರಿ ಸ್ಥಾನ ತೊರೆದ ಮರುದಿನವೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಅವರು, 'ಕರ್ನಾಲ್ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ಘೋಷಿಸುತ್ತಿದ್ದೇನೆ. ನೂತನ ಮುಖ್ಯಮಂತ್ರಿ ನಯಾಬ್ ಸೈನಿ ಅವರು ಕರ್ನಾಲ್ ವಿಧಾನಸಭಾ ಕ್ಷೇತ್ರದ ಹೊಣೆಯನ್ನು ಹೊತ್ತುಕೊಳ್ಳಲಿದ್ದಾರೆ' ಎಂದು ಹೇಳಿದ್ದಾರೆ.
ಮನೋಹರ್ಲಾಲ್ ಖಟ್ಟರ್ ಅವರು 2014ರಿಂದ ಕರ್ನಾಲ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇನ್ನು ಅವರ ರಾಜೀನಾಮೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಮೂಲಗಳ ಅನುಸಾರ ಖಟ್ಟರ್ ಅವರನ್ನು ಕರ್ನಾಲ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಲಿದೆ ಎಂದು ತಿಳಿದುಬಂದಿದೆ.