ತಿರುವನಂತಪುರಂ, ಎ30(Daijiworld News/SS): ಲಂಕಾ ಮಾದರಿಯಲ್ಲಿಯೇ ಆತ್ಮಾಹುತಿ ದಾಳಿಯನ್ನು ಕೇರಳದಲ್ಲಿಯೂ ನಡೆಸಲು ಐಎಸ್ಐಎಸ್ ಸಂಚು ನಡೆಸಿರುವುದು ರಿಯಾಜ್ ಎನ್ನುವ ಬಂಧಿತ ಉಗ್ರನಿಂದ ಬಯಲಾಗಿದೆ.
ಐಎಸ್ಐಎಸ್ ಜೊತೆ ನಂಟು ಹೊಂದಿರುವ ರಿಯಾಜ್ ಎನ್ನುವ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ದಳ ಎನ್ಐಎ ಬಂಧಿಸಿದ್ದು ವಿಚಾರಣೆ ವೇಳೆ ಆಘಾತಕಾರಿ ವಿಚಾರವನ್ನು ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ.
ಮುಸ್ಲಿಂ ಧರ್ಮ ಪ್ರಚಾರಕ ಝಾಕಿರ್ ನಾಯಕ್ ಹಾಗೂ ಶ್ರೀಲಂಕಾ ಉಗ್ರ ದಾಳಿಯ ಸಂಚುಕೋರ ಜೆಹ್ರನ್ ಹಶೀಮ್ ಭಾಷಣದಿಂದ ಪ್ರೇರಿತನಾಗಿದ್ದ ರಿಯಾಜ್ ಕೇರಳದಲ್ಲೂ ಅದೇ ಮಾದರಿಯ ದಾಳಿಯನ್ನು ನಡೆಸಲು ಹೊಂಚು ಹಾಕುತ್ತಿದ್ದ ಎಂದು ತನಿಖೆ ವೇಳೆ ಬಯಲಾಗಿದೆ.
ಮಾತ್ರವಲ್ಲ, ಈ ದಾಳಿ ಹಾಗೂ ಭಾರತದಲ್ಲಿ ಐಎಸ್ಐಎಸ್ ಕಾರ್ಯಾಚರಣೆ ಕುರಿತಂತೆ ಸಿರಿಯಾದಲ್ಲಿರುವ ಉಗ್ರರಾದ ಅಬ್ದುಲ್ ಖಯೂಮ್ ಜೊತೆಗೂ ಈತ ಮಾತುಕತೆ ನಡೆಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಶೀಮ್ ಶ್ರೀಲಂಕಾದಲ್ಲಿ ಈಸ್ಟರ್ ಸಂಡೇ ನಡೆದ ಆತ್ಮಾಹುತಿ ಬಾಂಬ್ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ. ರಿಯಾಜ್ ಬಳಿ ಅಬ್ದುಲ್ಲಾ ಆಡಿಯೋ ಕ್ಲಿಪ್ ಕೂಡ ಲಭ್ಯವಾಗಿದ್ದು, ರಿಯಾಜ್ ಅಬ್ದುಲ್ಲಾ ಜೊತೆ ಆನ್ಲೈನ್ ಚಾಟ್ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.