ಕೇರಳ, ಮಾ 14(DaijiworldNews/AA): ಯುಪಿಎಸ್ ಸಿ ಪರೀಕ್ಷೆಯನ್ನು ಬರೆದು ಅದರಲ್ಲಿ ಉತ್ತಮ ರ್ಯಾಂಕ್ ಪಡೆಯುವ ಮೂಲಕ ಉತ್ತೀರ್ಣರಾಗುವುದೇ ಒಂದು ಸವಾಲಾಗಿದೆ. ಆದರೆ ನಮ್ಮ ಜೀವನದಲ್ಲಿನ ಅಡೆತಡೆಗಳೊಂದಿಗೆ ಜೊತೆಗೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸವಾಲಿನ ಸಂಗತಿಯಾಗಿದೆ. ಹೀಗೆ ತನ್ನ ಜೀವನದ ಸವಾಲುಗಳನ್ನೆಲ್ಲಾ ಎದುರಿಸಿ ಯುಪಿಎಸ್ ಸಿ ಪರೀಕ್ಷೇ ಬರೆದು ಐಪಿಎಸ್ ಅಧಿಕಾರಿಯಾದ ಮೊಹಮ್ಮದ್ ಅಲಿ ಶಿಹಾಬ್ ಅವರ ಯಶೋಗಾಥೆ ಇದು.
ಕೇರಳದ ಎಡವಣ್ಣಪ್ಪರ ಮೂಲದ ಮೊಹಮ್ಮದ್ ಅಲಿ ಶಿಹಾಬ್ ಅವರು ತೀರಾ ಚಿಕ್ಕ ವಯಸ್ಸಿನವರಿರುವಾಗಲೇ ಅನಾರೋಗ್ಯ ಕಾರಣದಿಂದ ತಮ್ಮ ತಂದೆಯನ್ನು ಕಳೆದುಕೊಳ್ಳುತ್ತಾರೆ. ಇದರಿಂದ ಕುಟುಂಬವನ್ನು ಪೋಷಿಸುವ ಜವಾಬ್ದಾರಿ ಶಿಹಾಬ್ ಅವರ ತಾಯಿಗೆ ವರ್ಗಾವಣೆಯಾಗಿತ್ತು. ಆರ್ಥಿಕ ಸಮಸ್ಯೆಯಿಂದಾಗಿ ನಾಲ್ಕು ಮಕ್ಕಳನ್ನು ನೋಡಿಕೊಳ್ಳುವುದು ಅವರಿಗೆ ಕಷ್ಟವಾಯಿತು. ಹೀಗಾಗಿ ತನ್ನ ನಾಲ್ಕು ಮಂದಿ ಮಕ್ಕಳಲ್ಲಿ ಮಗ ಶಿಹಾಬ್ ಮತ್ತು ಹೆಣ್ಣು ಮಕ್ಕಳಾದ ಸೊಹ್ರಾಬಿ (8) ಹಾಗೂ ನಸೀಬಾ (5) ಅವರನ್ನು ಅನಾಥಾಶ್ರಮಕ್ಕೆ ಸೇರಿಸುತ್ತಾರೆ.
ಶಿಹಾಬ್ ಅವರು 12ನೇ ತರಗತಿವರೆಗೆ ಅನಾಥಾಶ್ರಮದಲ್ಲಿಯೇ ತನ್ನ ವ್ಯಾಸಂಗವನ್ನು ಮಾಡುತ್ತಾರೆ. ಸುಮಾರು 10 ವರ್ಷಗಳ ಕಾಲ ಅನಾಥಾಶ್ರಮದಲ್ಲಿಯೇ ಬೆಳೆದ ಶಿಹಾಬ್ ಅವರು ಮನೆಗೆ ಮರಳಿದ ನಂತರ, ತನ್ನ ಉನ್ನತ ಶಿಕ್ಷಣಕ್ಕಾಗಿ ಪುನಃ ಮನೆಯನ್ನು ತೊರೆಯುತ್ತಾರೆ. ಇನ್ನು ಆರ್ಥಿಕವಾಗಿ ಸದೃಢವಾಗಿರುವ ಉದ್ದೇಶದಿಂದ ಒಂದಲ್ಲ ಎರಡಲ್ಲ ಸುಮಾರು 21 ಸರ್ಕಾರಿ ಪರೀಕ್ಷೆಗಳನ್ನು ಬರೆಯುತ್ತಾರೆ. ಜೊತೆಗೆ ತಾವು ಬರೆದ 21 ಸರ್ಕಾರಿ ಪರೀಕ್ಷೆಗಳಲ್ಲೂ ಉತ್ತೀರ್ಣರಾಗುತ್ತಾರೆ. ಹೀಗಾಗಿ ಅರಣ್ಯ ಇಲಾಖೆಯಲ್ಲಿ ಗುಮಾಸ್ತನಾಗಿ, ಜೈಲು ವಾರ್ಡನ್ ಆಗಿ ರೈಲ್ವೆ ಟಿಕೆಟ್ ಪರೀಕ್ಷಕರಾಗಿ ಕೆಲಸ ಪಡೆಯುತ್ತಾರೆ.
ಬಳಿಕ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಲು ಪ್ರಾರಂಭಿಸುತ್ತಾರೆ. ತನ್ನ ಮೊದಲ ಎರಡು ಪ್ರಯತ್ನಗಳಲ್ಲಿ ವಿಫಲರಾದ ಶಿಹಾಬ್ ಅವರು, 2011 ರಲ್ಲಿ ಮೂರನೇ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಾರೆ. ತನ್ನ ಮೂರನೇ ಪ್ರಯತ್ನದಲ್ಲಿ 226ನೇ ರ್ಯಾಂಕ್ ಪಡೆದು ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಈ ಮೂಲಕ ಐಪಿಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ಶಿಹಾಬ್ ಅವರು ನನಸು ಮಾಡಿಕೊಳ್ಳುತ್ತಾರೆ.