ಬೆಂಗಳೂರು, , ಎ30(Daijiworld News/SS): ಕನ್ನಡದ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ನಟಿ ರಮ್ಯಾರನ್ನು ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟ ಕಾರಣಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್ಗೆ ಹೋಲಿಸುವಂತೆ ಫೋಟೊ ಸಹಿತ ಟ್ವೀಟ್ ಮಾಡಿರುವ ರಮ್ಯಾ ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದಾರೆ. ರಮ್ಯಾ, ಹಲವು ಬಾರಿ ಪ್ರಧಾನಿ ಮೋದಿ ವಿರುದ್ಧ ಟ್ವಿಟರ್ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಈಗ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಮಗುವೊಂದರ ಎರಡೂ ಕಿವಿ ಹಿಡಿದೆಳೆಯುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರ ಪಕ್ಕದಲ್ಲೆ ಪ್ರಧಾನಿ ಮೋದಿ ಕೂಡ ಮಗುವಿನ ಕಿವಿ ಎಳೆಯುತ್ತಿರುವ ಫೋಟೊ ಅಪ್ಲೋಡ್ ಮಾಡಿದ್ದಾರೆ.
ಈ ಬಗ್ಗೆ ಪೋಸ್ಟ್ ಮಾಡಿರುವ ನಟ ಬುಲೆಟ್ ಪ್ರಕಾಶ್ ರಮ್ಯ ಮೇಡಮ್ (ಪದ್ಮಾವತಿ) ಈ ಮಗುವಿನ ವಯಸ್ಸಿನಲ್ಲಿ ನಿಮ್ಮ ತಂದೆಯವರು ನಿಮ್ಮ ಕಿವಿ ಹಿಂಡಿದ್ದರೆ ನೀವು ಹೀಗೆ ಆಗುತ್ತಿರಲಿಲ್ಲ. ನೀವು ಎರಡು ಚುನಾವಣೆಗಳಲ್ಲಿ ನಿಮ್ಮ ಹಕ್ಕು ಅಂದರೆ ಮತ ಚಲಾಯಿಸದವರು. ನಿಮಗೆ ವಿಶ್ವನಾಯಕ ನರೇಂದ್ರ ಮೋದಿಯವರ ಬಗ್ಗೆ ಮಾತಾಡೋಕ್ಕೆ ಯಾವುದೇ ನೈತಿಕತೆ ಇಲ್ಲ... ನಾಳೆ ವೀಡಿಯೋ ಮೂಲಕ ಉತ್ತರ ಕೊಡುತ್ತೀನಿ... ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರು ಸೋಷಿಯಲ್ ಮೀಡಿಯಾಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಲೇ ಇರುತ್ತಾರೆ. ಈ ಬಗ್ಗೆ ಹಲವು ಟೀಕೆಗಳು ಆಗಾಗ ವ್ಯಕ್ತವಾಗುತ್ತಲೇ ಇದೆ.