ಬೆಂಗಳೂರು, ಮಾ 15(DaijiworldNews/MS): “ಎರಡೂ ಪಕ್ಷಗಳ ಸಾಕಷ್ಟು ಜನ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರಲು ಉತ್ಸುಕರಾಗಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಪಕ್ಷ ಸೇರ್ಪಡೆಗೆ ಸೂಚನೆ ನೀಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸ ಮತ್ತು ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯಿಸಿ“ಸುಮಾರು 5- 6 ಕ್ಷೇತ್ರಗಳಲ್ಲಿ ನಮಗೂ ಮತ್ತು ದಳಕ್ಕೂ ನೇರಾ- ನೇರ ಸ್ಪರ್ಧೆ ಇತ್ತು. ಆದರೆ ಈಗ ದಳ ಎಲ್ಲಿದೆ? ಎರಡೂ ಪಕ್ಷಗಳ ನಾಯಕರುಗಳು ನಮ್ಮ ವಿರುದ್ಧ ಹೋರಾಟ ಮಾಡಿದವರು. ಅವರೂ ಸಹ ಮುಂದಿನ ರಾಜಕೀಯ ಭವಿಷ್ಯವನ್ನು ನೋಡುತ್ತಾರಲ್ಲವೇ?ದೇವೆಗೌಡರು ಮತ್ತು ಕುಮಾರಸ್ವಾಮಿ ಅವರ ಕುಟುಂಬವೇ ಬಿಜೆಪಿ ಸೇರುತ್ತಿದೆ. ಹೀಗಾದರೆ ನಮ್ಮ ಗತಿ ಏನು ಎಂದು ದಳದ ಕಾರ್ಯಕರ್ತರು ನಮ್ಮ ಪಕ್ಷದ ನಾಯಕರ ಸಂಪರ್ಕ ಮಾಡುತ್ತಿದ್ದಾರೆ. ನಾನು ಸಹ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ನಾಯಕ. ನಮ್ಮ ಚುನಾವಣಾ ಅಭ್ಯರ್ಥಿಯ ಘೋಷಣೆಯೂ ಆಗಿದೆ. ನಾವು ಸಹ ತಯಾರಿ ಮಾಡಿಕೊಳ್ಳಬೇಕಲ್ಲವೇ? ಮುಂದೇನು ಮಾಡುವುದು ನಾವು ಸಹ ಚರ್ಚೆ ಮಾಡುತ್ತಿದ್ದೇವೆ” ಎಂದು ವ್ಯಂಗ್ಯವಾಡಿದರು.
ಡಿ.ಕೆ.ಸುರೇಶ್ ಅವರಿಗೆ ನಾವು ತಕ್ಕಪಾಠ ಕಲಿಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ “ಮೊದಲು ಅವರ ಪಕ್ಷದ ಪರಿಸ್ಥಿತಿ ಬಗ್ಗೆ ಮಾತನಾಡಲಿ. ದಳ ಇದೆಯೋ? ಇಲ್ಲವೋ? ಎಂಬುದರ ಬಗ್ಗೆ ಮೊದಲು ಹೇಳಲಿ. ಆನಂತರ ಪ್ರಬಲ ಅಭ್ಯರ್ಥಿ ಬಗ್ಗೆ ಮಾತನಾಡಲಿ” ಎಂದರು.
ಬೆಂಗಳೂರು ಅರಮನೆ ಜಾಗದ ವಿವಾದದ ಬಗ್ಗೆ ಕೇಳಿದಾಗ “ಜಾಗ ವಿವಾದದ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿತ್ತು. ಇತ್ತೀಚಿನ ಬೆಳವಣಿಗೆಯ ಬಗ್ಗೆ ನನಗೂ ಹೆಚ್ಚಿನ ಮಾಹಿತಿ ಇಲ್ಲ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ವೇಳೆ ತೀರ್ಮಾನವಾಗಿದ್ದ ವಿಚಾರವಿದು. ನ್ಯಾಯಲಯದ ಆದೇಶದಂತೆ ನಾವು ನಡೆದುಕೊಳ್ಳಬೇಕು. ಅಧಿಕಾರಿಗಳು ಖುದ್ದಾಗಿ ನ್ಯಾಯಲಯಕ್ಕೆ ಹಾಜರಾಗಬೇಕು ಎಂದು ಕೋರ್ಟ್ ಆದೇಶ ನೀಡಿತ್ತು. ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ನಿಮಗೆ ಉತ್ತರಿಸುತ್ತೇನೆ” ಎಂದು ತಿಳಿಸಿದರು.
ಸಿಎಎಯನ್ನು ಕರ್ನಾಟಕದಲ್ಲಿ ಜಾರಿಗೊಳಿಸುತ್ತೀರಾ ಎಂದು ಕೇಳಿದಾಗ “ಇದರ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ಸಿಎಂ ಮತ್ತು ಇತರೇ ನಾಯಕರ ಬಳಿ ಚರ್ಚೆ ಮಾಡಿದ ನಂತರ ಮಾತನಾಡುತ್ತೇನೆ” ಎಂದರು.
ಇಂಡಿಯಾ ಒಕ್ಕೂಟ ಜನರನ್ನು ಲೂಟಿ ಮಾಡುತ್ತದೆ ಎಂದು ತಮಿಳುನಾಡಿನಲ್ಲಿ ಮೋದಿ ಪ್ರಧಾನಿ ಹೇಳಿಕೆ ಬಗ್ಗೆ ಕೇಳಿದಾಗ “ಚುನಾಚಣಾ ಫಲಿತಾಂಶ ಇದಕ್ಕೆಲ್ಲಾ ಉತ್ತರ ನೀಡುತ್ತದೆ” ಎಂದು ತಿರುಗೇಟು ನೀಡಿದರು.
ಒಮ್ಮತದಿಂದ ಅಭ್ಯರ್ಥಿ ಪಟ್ಟಿ ನಿರ್ಧಾರ:
ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಎಲ್ಲಾ ನಾಯಕರ ಅಭಿಪ್ರಾಯ ಸಂಗ್ರಹಿಸಲಾಗಿದೆಯೇ ಎಂದು ಕೇಳಿದಾಗ, “ಲೋಕಸಭೆ ಅಭ್ಯರ್ಥಿ ಆಯ್ಕೆ ಸಂಬಂಧ ಸ್ಥಳೀಯ ಮಟ್ಟದಲ್ಲಿ ವಿಚಾರ, ಅಭಿಪ್ರಾಯಗಳನ್ನು ಸಂಗ್ರಹಿಸಿ ಹೈಕಮಾಂಡ್ ನಾಯಕರಿಗೆ ಕಳುಹಿಸುವುದು ನಮ್ಮ ಕರ್ತವ್ಯ. ನಾವು ಅದನ್ನು ಮಾಡಿದ್ದೇವೆ” ಎಂದು ತಿಳಿಸಿದರು.
ಕಾಂಗ್ರೆಸ್ ಚುನಾವಣೆ ಸಮಿತಿ (ಸಿಇಸಿ) ಸಭೆ ಸೋಮವಾರಕ್ಕೆ ಮುಂದೂಡಿಕೆಯಾಗಿರುವ ಬಗ್ಗೆ ಕೇಳಿದಾಗ, “ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿದ್ದಾರೆ. ಅವರು ವೈದ್ಯರಿಂದ ಸಮಯ ಪಡೆದಿದ್ದ ಕಾರಣ ಇಲ್ಲಿಗೆ ಆಗಮಿಸಿದ್ದಾರೆ” ಎಂದರು.
ಬಿಜೆಪಿಯಲ್ಲಿನ ಟಿಕೆಟ್ ಗೊಂದಲದ ಬಗ್ಗೆ ಕೇಳಿದಾಗ, “ಬಿಜೆಪಿ ಪಕ್ಷದ ಟಿಕೆಟ್ ವಿಚಾರವನ್ನು ಅವರ ಪಕ್ಷದವರು ನೋಡಿಕೊಳ್ಳುತ್ತಾರೆ” ಎಂದರು.
ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ಬಗ್ಗೆ ಕೇಳಿದಾಗ "ತಡವಾಗಿ ಸುದ್ದಿ ತಿಳಿಯಿತು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹೀಗಾಗಿ ನಾನು ಪ್ರತ್ರಿಕ್ರಿಯೆ ನೀಡುವುದಿಲ್ಲ. ನಮ್ಮ ಸರ್ಕಾರದಲ್ಲಿ ಸಮರ್ಥ ಗೃಹಮಂತ್ರಿಯಾಗಿ ಪರಮೇಶ್ವರ್ ಅವರು ಇದ್ದಾರೆ. ಅವರು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಈ ವಿಚಾರವಾಗಿ ಹೆಚ್ಚಿನ ಮಾಹಿತಿ ನೀಡಲಿದ್ದಾರೆ. ಈ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ." ಎಂದು ಉತ್ತರಿಸಿದರು.