ನವದೆಹಲಿ, ಮಾ 15(DaijiworldNews/MS): ಲೋಕಸಭಾ ಚುನಾವಣೆಗೆ ಬಿಜೆಪಿಯ 3ನೇ ಪಟ್ಟಿ ನಾಳೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಇಂದು ಕೇಂದ್ರ ಚುನಾವಣ ಆಯೋಗದ ಪತ್ರಿಕಾಗೋಷ್ಠಿ ಹಿನ್ನೆಲೆಯಲ್ಲಿ ಒಂದು ಬಿಡುಗಡೆ ಎನ್ನಲಾಗಿದ್ದ ಮೂರನೇ ಪಟ್ಟಿ ನಾಳೆಗೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ. ರಾಯಚೂರು, ಚಿತ್ರದುರ್ಗ, ಬೆಳಗಾವಿ, ಚಿಕ್ಕ ಬಳ್ಳಾಪುರ, ಕೋಲಾರ, ಮಂಡ್ಯ, ಹಾಸನ ಹಾಗೂ ಉತ್ತರ ಕನ್ನಡ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಇದೇ ಪಟ್ಟಿಯಲ್ಲಿ ಹೊರಬೀಳುವ ಸಾಧ್ಯತೆ ಇದೆ. ಈ ಐದು ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಡಬೇಕಾಗಿದೆ.
ಇನ್ನೊಂದೆಡೆ ಉತ್ತರ ಕನ್ನಡದ ಎಲ್ಲರ ಚಿತ್ತ ನೆಟ್ಟಿದ್ದು, ಹಾಲಿ ಸಂಸದ ಅನಂತಕುಮಾರ್ ಹೆಗಡೆಯವರಿಗೆ ಈ ಬಾರಿ ಟಿಕೆಟ್ ನೀಡಲಾಗುತ್ತೋ ಇಲ್ಲವೋ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ ಹೆಗಡೆಯವರಿಗೆ ಟಿಕೆಟ್ ಸಿಗದೆ ಇದ್ದರೆ ಹೆಗಡೆ ಪರ ಶಿಶಿಭೂಷಣ್ ಹೆಗಡೆ ನಿಲ್ಲಬಹುದು ಎನ್ನಲಾಗುತ್ತಿದೆ. ಇವೆಲ್ಲದರ ಮದ್ಯೆ ಚಕ್ರವರ್ತಿ ಸೂಲಿಬೆಲೆಯ ಹೆಸರು ಪ್ರಮುಖವಾಗಿ ಕೇಳಿಬಂದಿದೆ.ಅವರಿಗೆ ಟಿಕೆಟ್ ನೀಡದಂತೆ ರಾಜ್ಯಮಟ್ಟದ ಬಿಜೆಪಿ ಮುಖಂಡರೊಬ್ಬರು ಅಡ್ಡಗಾಲು ಹಾಕಿದ್ದಾರೆ ಎನ್ನುವುದು ವರದಿಯಾಗಿದೆ.
ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ, ಹಾಸನದಿಂದ ಪ್ರಜ್ವಲ್ ರೇವಣ್ಣ ಅವರನ್ನು ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆಗಳು ಇವೆ. ಕಮಲ ಪಕ್ಷದ ಪಾಲಿಗೆ ಬರುವ ಐದು ಕ್ಷೇತ್ರಗಳ ಪೈಕಿ ಚಿಕ್ಕಬಳ್ಳಾಪುರ ಹಾಗೂ ಉತ್ತರ ಕನ್ನಡ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿದೆ. ಮಾಜಿ ಸಚಿವ ಡಾ. ಸುಧಾಕರ್ ಹಾಗೂ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಪುತ್ರ ಅಲೋಕ ಹೆಸರು ತೀವ್ರ ಚರ್ಚೆಯಲ್ಲಿದ್ದು, ಅಚ್ಚರಿ ಎಂಬಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರನ್ನು ಕೊನೆ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚಿಕ್ಕಬಳ್ಳಾಪುರದಿಂದ ಕಣಕ್ಕೆ ಇಳಿಸಬಹುದೆಂದು ಲೆಕ್ಕಚಾರ ಹಾಕಲಾಗುತ್ತಿದೆ.