ಹರಿಯಾಣ, ಮಾ 16(DajiworldNews/AA): ಸಾಮಾನ್ಯವಾಗಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದೇ ಕಷ್ಟ. ಆದರೆ ಮನೆಯವರ ವಿರೋಧದ ನಡುವೆಯೂ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಐಎಎಸ್ ಅಧಿಕಾರಿ ವಂದನಾ ಸಿಂಗ್ ಚೌಹಾಣ್ ಅವರ ಯಶೋಗಾಥೆ ಇದು.
ವಂದನಾ ಅವರು ಮೂಲತಃ ಹರಿಯಾಣದ ನಸ್ರುಲ್ಲಾಗರ್ ಎಂಬ ಪುಟ್ಟ ಹಳ್ಳಿಯವರು. ವಂದನಾ ಅವರು ಉತ್ತಮ ಶಾಲೆಗೆ ವ್ಯಾಸಂಗ ಮಾಡಲು ತೆರಳಲಿಲ್ಲ. ಆದರೆ ಆಕೆಯ ಸಹೋದರನನ್ನು ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳುಹಿಸಲಾಯಿತು. ಹೀಗಾಗಿ ತನಗೂ ಓದುವ ಬಯಕೆ ಇರುವ ಬಗ್ಗೆ ಪೋಷಕರ ಮುಂದೆ ವಂದನಾ ವ್ಯಕ್ತಪಡಿಸುತ್ತಾರೆ. ಆದರೆ ಆಕೆಯನ್ನು ಪೋಷಕರು ಮೊರಾದಾಬಾದ್ ನ ಗುರುಕುಲಕ್ಕೆ ಸೇರಿಸುತ್ತಾರೆ.
ಸಂಬಂಧಿಕರು ವಂದನಾ ಅವರು ವ್ಯಾಸಂಗ ಮಾಡುತ್ತಿದ್ದ ಬಗ್ಗೆ ಟೀಕೆ ಮಾಡುತ್ತಿದ್ದರು. ಅವರ ಟೀಕೆಯನ್ನು ಲೆಕ್ಕಿಸದೆ ವಂದನಾ ಅವರು ಐಎಎಸ್ ಅಧಿಕಾರಿಯಾಗುವ ಬಗ್ಗೆ ತನ್ನ ಗಮನ ಹರಿಸುತ್ತಾರೆ. ವಂದನಾ ಅವರು ಭಿವಾನಿಯ ಕನ್ಯಾ ಗುರುಕುಲದಲ್ಲಿ ಸಂಸ್ಕೃತದಲ್ಲಿ ತನ್ನ ಶಿಕ್ಷಣವನ್ನು ಪೂರ್ಣಗೊಳಿಸುವಾಗ ಪ್ರತಿದಿನ 12 ರಿಂದ 14 ಗಂಟೆಗಳ ಕಾಲ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಲು ಮೀಸಲಿಡುತ್ತಾರೆ. ಬಳಿಕ ಕುಟುಂಬ ಅವರಿಗೆ ಉನ್ನತ ಶಿಕ್ಷಣಕ್ಕಾಗಿ ಸಹಕಾರ ನೀಡದ ಕಾರಣ ಆಗ್ರಾದ ಬಿಆರ್ ಅಂಬೇಡ್ಕರ್ ವಿಶ್ವವಿದ್ಯಾಲಯದಿಂದ ಆನ್ಲೈನ್ ಕೋರ್ಸ್ಗಳ ಮೂಲಕ ಎಲ್ಎಲ್ಬಿ ಪದವಿಯನ್ನು ಪಡೆಯುತ್ತಾರೆ.
ವಂದನಾ ಅವರಿಗೆ ತನ್ನ ಗುರಿಯನ್ನು ಸಾಧಿಸುವಲ್ಲಿ ಅವರ ಸಹೋದರ ಅಪಾರ ಬೆಂಬಲವನ್ನು ನೀಡುತ್ತಾರೆ. 2012 ರಲ್ಲಿ ಹಿಂದಿಯಲ್ಲಿ ನಡೆಸಿದ ಯುಪಿಎಸ್ಸಿ ಪರೀಕ್ಷೆ ಬರೆದ ವಂದನಾ ಅವರು, 8ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಪಡೆಯಲು ಮುಂದಾಗುವ ಗ್ರಾಮೀಣ ಭಾಗದ ಹುಡುಗಿಯರಿಗೆ ಮಾದರಿಯಾಗಿದ್ದಾರೆ.
ಪ್ರಸ್ತುತ ವಂದನಾ ಅವರು ಅಲ್ಮೋರಾ ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕರಾಗಿ (ಡಿಎಂ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೆಯವರ ವಿರೋಧದ ನಡುವೆಯೂ ಐಎಎಸ್ ಅಧಿಕಾರಿಯಾದ ವಂದನಾ ಅವರು ಇತರೆ ಯುಪಿಎಸ್ಸಿ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.