ಬೆಂಗಳೂರು,ಏ 30 (Daijiworld News/MSP): ಎಸ್ ಎಸ್ಎಲ್ ಸಿ ಪರೀಕ್ಷಾ ಫಲಿತಾಂಶವನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಕಚೇರಿಯಲ್ಲಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಉಮಾ ಶಂಕರ್ ಏ. 30 ರ ಮಂಗಳವಾರ ಪ್ರಕಟಿಸಿದರು.
ಈ ಬಾರಿ 73.7ರಷ್ಟು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿಗಿಂತ ಫಲಿತಾಂಶದಲ್ಲಿ ಶೇ .1.77ರಷ್ಟು ಹೆಚ್ಚಳವಾಗಿದೆ ಎಂದು ಅವರು ತಿಳಿಸಿದರು. ಇಬ್ಬರು ವಿದ್ಯಾರ್ಥಿನಿಯರು 625ರಲ್ಲಿ 625 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.ಕುಮುಟದ ನಾಗಾಂಜಲಿ ಮತ್ತು ಅನೇಕಲ್ ನ ಸೃಜನಾ.ಡಿ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ
ಮಾ.21ರಿಂದ ಎ.4ರ ವರೆಗೆ ನಡೆದ ಎಸೆಸೆಲ್ಸಿ ಪರೀಕ್ಷೆಗೆ 8.41 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಎಲ್ಲ ಪರೀಕ್ಷೆಗಳಲ್ಲೂ ಸರಾಸರಿ 25 ಸಾವಿರ ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.
ಫಲಿತಾಂಶದಲ್ಲಿ ಹಾಸನ ಪ್ರಥಮ, ರಾಮನಗರ ದ್ವಿತೀಯ, ಬೆಂಗಳೂರು ಗ್ರಾಮಾಂತರ ತೃತೀಯಾ ಮತ್ತು ಉತ್ತರ ಕನ್ನಡ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಇನ್ನು ಫಲಿತಾಂಶದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಶೇ. 76.67 ರಷ್ಟು ಫಲಿತಾಂಶ ಪಡೆದಿದ್ದಾರೆ.