ಕಲುಬುರ್ಗಿ, ಮಾ 16(DaijiworldNews/ AK): ಕರ್ನಾಟಕವನ್ನು ಕಾಂಗ್ರೆಸ್ ಲೂಟಿಯಿಂದ ದೂರವಿಡಲು ಗರಿಷ್ಠ ಬಿಜೆಪಿ ಸಂಸದರನ್ನು ಇಲ್ಲಿಂದ ಆಯ್ಕೆ ಮಾಡಿ ಎಂದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನವಿ ಮಾಡಿದರು.
ಕಲಬುರ್ಗಿಯ ಎನ್.ವಿ ಆಟದ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನನಗೆ ಕರ್ನಾಟಕದ ಬಿಜೆಪಿಯ ಪ್ರತಿಯೊಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಡುವ ಮತ್ತು ಕಾಂಗ್ರೆಸ್ ಖಾತೆ ತೆರೆಯಲು ಅವಕಾಶ ಕೊಡುವುದಿಲ್ಲ ಎಂಬ ಗ್ಯಾರಂಟಿ ಕೊಡಿ. ಕಮಲದ ಚಿಹ್ನೆಗೆ ಮತ ಕೊಡಿ ಎಂದು ತಿಳಿಸಿದರು.
ಕರ್ನಾಟಕವನ್ನು ಕಾಂಗ್ರೆಸ್ ಕುಟುಂಬದ ಎಟಿಎಂ ಮಾಡಿಕೊಂಡಿದ್ದಾರೆ. ಇಂಡಿ ಒಕ್ಕೂಟ ಮತ್ತು ಕಾಂಗ್ರೆಸ್ನ ಮುಖಂಡರು ಕೂಡ ಅಬ್ ಕೀ ಬಾರ್ ಮೋದಿ ಸರಕಾರ್ ಎಂದು ಹೇಳುತ್ತಿದ್ದಾರೆ. ಈ ಬಾರಿ ಜನಾದೇಶ ಬಿಜೆಪಿ ಪರವಾಗಿ ಇರಲಿ ಎಂದು ಅವರು ವಿನಂತಿಸಿದರು. ರಾಜ್ಯದ ಎಲ್ಲ ಸೀಟುಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಜನರಲ್ಲಿ ಕೋರಿದರು.ಬಿಜೆಪಿಯ ಕೇಂದ್ರ ಸರಕಾರವು ಕರ್ನಾಟಕದ ಅಭಿವೃದ್ಧಿಗೆ ಸದಾ ಶ್ರಮಿಸಿದೆ. ನಾವು ಅನುಭವ ಮಂಟಪದ ಪ್ರೇರಣೆ ಪಡೆದಿದ್ದೇವೆ ಎಂದ ಅವರು, ಕರ್ನಾಟಕದ ಗೌರವ ಮತ್ತು ಹೆಮ್ಮೆ ಹೆಚ್ಚಿಸಲು ಶ್ರಮಿಸಿದ್ದೇವೆ ಎಂದು ತಿಳಿಸಿದರು.ಕಾಂಗ್ರೆಸ್ಸಿಗರು ಈ ದೇಶದ ಪರಂಪರೆಗೆ ಅಗೌರವ ಸೂಚಿಸುತ್ತಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಮತ್ತು ಅದರ ಮುಖಂಡರು ಎಷ್ಟೇ ಉಡುಪು ಬದಲಿಸಿದರೂ ಅದರ ಮೂಲಗುಣ ಬದಲಾಗುವುದಿಲ್ಲ. ಕರ್ನಾಟಕದ ಜನರಲ್ಲಿ ಕಾಂಗ್ರೆಸ್ ಬಗ್ಗೆ ಆಕ್ರೋಶವಿದೆ. ಕಾಂಗ್ರೆಸ್ಸಿನ ಬಗ್ಗೆ ಇಷ್ಟು ಕಡಿಮೆ ಸಮಯದಲ್ಲಿ ಜನರು ವಿಶ್ವಾಸ ಕಳಕೊಂಡಿದ್ದಾರೆ ಎಂದು ನುಡಿದರು.ಎಷ್ಟೇ ಅವಕಾಶ ಕೊಟ್ಟರೂ ಕಾಂಗ್ರೆಸ್ ಬದಲಾಗುವುದಿಲ್ಲ. ಕರ್ನಾಟಕದಲ್ಲಿ ಕಾನೂನು- ಸುವ್ಯವಸ್ಥೆ ಕುಸಿದಿದೆ. ಜನರ ಮನಸ್ಸಿನಲ್ಲಿ ಆಕ್ರೋಶ ಹೆಚ್ಚಾಗಿದೆ. ಆತಂಕದಿಂದ ಜನತೆ ಜೀವಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಅದರ ಕುಟುಂಬವಾದಿಗಳಿಗೆ ಭ್ರಷ್ಟಾಚಾರವೇ ಆಮ್ಲಜನಕ ಎಂದು ಟೀಕಿಸಿದರು.
ನಮೋ ಇನ್ ಕನ್ನಡ ಮೂಲಕ ಮೋದಿ ಮೇರಿ ಜೇಬ್ ಮೇ ಹೈ ಎಂದು ಹೆಮ್ಮೆಯಿಂದ ನೀವು ಹೇಳುವಂತಾಗಲಿ ಎಂದು ತಿಳಿಸಿದರು.ಭ್ರಷ್ಟಾಚಾರ ಇಲ್ಲದೆ ಕಾಂಗ್ರೆಸ್ಸಿಗರು ಶ್ವಾಸೋಚ್ವಾಸ ಮಾಡುವುದಿಲ್ಲ. ಇಲ್ಲಿ ಅರಾಜಕತೆ ಹೆಚ್ಚಾಗಿದೆ. ಕಾಂಗ್ರೆಸ್ ಚುನಾವಣೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸುತ್ತಿಲ್ಲ ಎಂದು ಆಕ್ಷೇಪಿಸಿದ ಅವರು, ಉಚಿತ ವಿದ್ಯುತ್ ಬದಲು ಕತ್ತಲೆಯ ಬದುಕು ಜನರದಾಗಿದೆ. ಪಂಪ್ ಚಾಲೂ ಆಗುತ್ತಿಲ್ಲ. ಮೋದಿ ಸರಕಾರವು 50 ಲಕ್ಷಕ್ಕೂ ಹೆಚ್ಚು ಜನರಿಗೆ ಕಿಸಾನ್ ಸಮ್ಮಾನ್ ಮೂಲಕ ವರದಾನವಾಗಿದೆ. ಮೊದಲು ಬಿಜೆಪಿ ಸರಕಾರ 4 ಸಾವಿರ ಸೇರಿಸಿ ಕೊಡುತ್ತಿತ್ತು. ಆದರೆ, ಅದನ್ನು ಕಾಂಗ್ರೆಸ್ ಸರಕಾರ ನಿಲ್ಲಿಸಿದೆ ಎಂದು ಆರೋಪಿಸಿದರು.