ನವದೆಹಲಿ, ಏ 30 (Daijiworld News/MSP): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಅವರ ಬ್ರಿಟಿಷ್ ಪೌರತ್ವ ಕುರಿತು ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ದೂರಿನ ಹಿನ್ನಲೆಯಲ್ಲಿ ರಾಹುಲ್ ಗಾಂಧಿಗೆ ನೊಟೀಸ್ ಜಾರಿ ಮಾಡಿದ್ದು ಪೌರತ್ವ ವಿವಾದಕ್ಕೆ ಸಂಬಂಧಪಟ್ಟಂತೆ ನೀಡಿರುವ ದೂರಿಗೆ ಸಂಬಂಧಿಸಿದಂತೆ 15 ದಿನಗಳೊಳಗೆ ಉತ್ತರಿಸುವಂತೆ ಗೃಹ ಸಚಿವಾಲಯ ಸೂಚಿಸಿದೆ.
ರಾಹುಲ್ ಗಾಂಧಿ ಅವರು ಬ್ರಿಟಿಷ್ ಪ್ರಜೆಯ ಹಕ್ಕು ಪಡೆದುಕೊಂಡಿದ್ದು, ಆದರೆ ಭಾರತದಲ್ಲಿ ದ್ವಿಪೌರತ್ವಕ್ಕೆ ಅವಕಾಶವಿಲ್ಲ ಎಂದು ಸುಬ್ರಹ್ಮಣ್ಯಂ ಸ್ವಾಮಿ ದೂರಿದ್ದರು. 2003ರಲ್ಲಿ ಇಂಗ್ಲೆಂಡ್ ನಲ್ಲಿ ನೋಂದಣಿಯಾದ ಬ್ಯಾಕೊಪ್ಸ್ ಲಿಮಿಟೆಡ್ ಕಂಪನಿಯ ನಿರ್ದೇಶಕರು ಮತ್ತು ಕಾರ್ಯದರ್ಶಿಗಳಲ್ಲಿ ರಾಹುಲ್ ಗಾಂಧಿ ಕೂಡಾ ಒಬ್ಬರಾಗಿದ್ದು, ಇದರ ವಿಳಾಸ 51ನೇ ಸೌತ್ ಗೇಟ್ ಸ್ಟ್ರೀಟ್, ವಿಂಚೆಸ್ಟರ್, ಹ್ಯಾಂಪ್ ಶೈರ್ ಎಸ್ಒ23 9ಇಎಚ್ ಎಂದಿದೆ. ಮಾತ್ರವಲ್ಲದೆ 2005 ಅಕ್ಟೋಬರ್ ನಿಂದ 2006ರ ಅಕ್ಟೋಬರ್ ವರೆಗೆ ವಾರ್ಷಿಕವಾಗಿ ಸಲ್ಲಿಸಿರುವ ಐಟಿ ಸಲ್ಲಿಕೆಯಲ್ಲಿ ರಾಹುಲ್ ಗಾಂಧಿ ಬ್ರಿಟನ್ ಪ್ರಜೆ ಎಂದು ಘೋಷಿಸಿದ್ದಾರೆ.
ಈ ಬಗ್ಗೆ ಗೃಹ ಸಚಿವಾಲಯಕ್ಕೆ ದೂರು ಬಂದಿದ್ದು ಇದಕ್ಕೆ ಸಂಬಂಧಿಸಿದಂತೆ 15 ದಿನಗಳೊಳಗೆ ಉತ್ತರಿಸಬೇಕು ಎಂದು ರಾಹುಲ್ ಗಾಂಧಿಗೆ ಸೂಚಿಸಿದ್ದಾರೆ. ಪೌರತ್ವ ಇಲಾಖೆಯ ನಿರ್ದೇಶಕರಾದ ಬಿ ಸಿ.ಜೋಷಿ ಈ ನೊಟೀಸ್ ನೀಡಿದ್ದಾರೆ.