ಬೆಂಗಳೂರು, ಎ30(Daijiworld News/SS): ನಿರೀಕ್ಷಿತ ಎಸ್ಎಸ್ಎಲ್ಸಿ ಫಲಿತಾಂಶ ಮಂಗಳವಾರ ಬೆಳಗ್ಗೆ ಪ್ರಕಟವಾಗಿದ್ದು ಶೇಕಡಾ 73.70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಯಾದಗಿರಿ ಕೊನೆಯ ಸ್ಥಾನ ಪಡೆದಿದೆ.
ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಆನೇಕಲ್ನಸೆಂಟ್ ಫಿಲೋಮಿನಾ ಶಾಲೆಯ ಸೃಜನಾ ಡಿ. ಮತ್ತು ಕುಮಟಾದ ನಾಗಾಂಜಲಿ ನಾಯಕ್ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಪಡೆದಿದ್ದಾರೆ.
ಈ ಬಾರಿಯ ಫಲಿತಾಂಶದಲ್ಲಿ ಯಾವುದೇ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಶೂನ್ಯ ಫಲಿತಾಂಶವನ್ನು ಪಡೆಯದೆ ಜನರ ಹುಬ್ಬೇರಿಸುವಂತೆ ಮಾಡಿದ್ದಾರೆ. ಇದು ಕರ್ನಾಟಕದ ಪಾಲಿಗೆ ಹೆಮ್ಮೆಯ ವಿಷಯವಾಗಿದೆ. 2019ನೇ ಸಾಲಿನಲ್ಲಿ ಶೇ 73.70ರಷ್ಟು ಫಲಿತಾಂಶ ಬಂದಿತ್ತು.
ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಶೇ 79.59ರಷ್ಟು ಬಾಲಕಿಯರು, ಶೇ 68.46ರಷ್ಟು ಬಾಲಕರು ಉತ್ತೀರ್ಣಗೊಂಡಿದ್ದಾರೆ. ಹಾಸನ ಜಿಲ್ಲೆ ಮೊದಲ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆಯ ಕಡೆಯ ಸ್ಥಾನದಲ್ಲಿದೆ.
ಯಾವ ಸರ್ಕಾರಿ ಶಾಲೆಯೂ ಕೂಡ ಶೂನ್ಯ ಫಲಿತಾಂಶ ಪಡೆಯದೆ ದಾಖಲೆ ನಿರ್ಮಿಸಿವೆ. ಕಳೆದ ಬಾರಿ 6 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿತ್ತು. ಒಟ್ಟು 593 ಸರ್ಕಾರಿ ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿವೆ. ಅನುದಾನಿತ ಶಾಲೆಗಳ ಪೈಕಿ 130 ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಹಾಗೂ 9 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಇನ್ನು 903 ಅನುದಾನರಹಿತ ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಹಾಗೂ 37 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.
ಫಲಿತಾಂಶವನ್ನು http://kseeb.kar.nic.in/ ನಲ್ಲಿ ಪಡೆಯಬಹುದಾಗಿದೆ.