ಹೈದರಾಬಾದ್, ಮಾ 19(DaijiworldNews/AA): ಕೆಲವೊಮ್ಮೆ ಕನಸಿನ ಬೆನ್ನತ್ತಿ ಸಾಧನೆಯ ಹಾದಿಯಲ್ಲಿರುವಾಗ ಹಲವು ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಹೀಗೆ ಐಪಿಎಸ್ ಅಧಿಕಾರಿಯಾಗುವ ಕನಸು ಕಂಡು ಕ್ರೀಡಾ ಜೀವನವನ್ನೇ ತೊರೆದು ಭಾರತೀಯ ಪೊಲೀಸ್ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ತಿಕ್ ಮಧಿರಾ ಅವರ ಯಶೋಗಾಥೆ ಇದು.
ಕಾರ್ತಿಕ್ ಮಧಿರಾ ಅವರು ಮೂಲತಃ ತೆಲಂಗಾಣದ ಹೈದರಾಬಾದ್ ನವರು. ಅವರು ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಗಳಿಸಿರುವ ಅವರು ಉತ್ತಮ ಕ್ರಿಕೆಟ್ ಪಟು. ಅಂಡರ್-13, 15, ಅಂಡರ್-17, 19 ಹಂತಗಳಲ್ಲಿ ಹಾಗೂ ವಿಶ್ವವಿದ್ಯಾನಿಲಯ ಮಟ್ಟದ ಕ್ರಿಕೆಟ್ ಆಟಗಾರರಾಗಿದ್ದರು.
ಕಾರ್ತಿಕ್ ಅವರು ತಮ್ಮ ವೈಯಕ್ತಿಕ ಕಾರಣಗಳಿಂದ ಹಾಗೂ ಗಾಯದ ಸಮಸ್ಯೆಯಿಂದಾಗಿ ಕ್ರಿಕೆಟ್ ಅನ್ನು ತೊರೆದು, ಡೆಲಾಯ್ಟ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿ ತಮ್ಮ ಮತ್ತೊಂದು ಇನ್ನಿಂಗ್ಸ್ ಪ್ರಾರಂಭಿಸುತ್ತಾರೆ. 6 ತಿಂಗಳ ಕಾಲ ಕೆಲಸ ಮಾಡಿದ ಇವರಿಗೆ ಯುಪಿಎಸ್ ಸಿ ಪರೀಕ್ಷೆ ಭೇದಿಸುವ ಮನಸ್ಸಾಗುತ್ತದೆ. ಈ ಹಿನ್ನೆಲೆ ಕೆಲಸ ತೊರೆದ ಕಾರ್ತಿಕ್ ಯುಪಿಎಸ್ ಸಿ ಪರೀಕ್ಷೆಗೆ ತಯಾರಿಯನ್ನು ನಡೆಸುತ್ತಾರೆ.
ಕಾರ್ತಿಕ್ ಅವರು ಮೂರು ಬಾರಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗುತ್ತಾರೆ. ಆದರೆ ತಮ್ಮ ಪ್ರಯತ್ನವನ್ನು ನಿಲ್ಲಿಸದೆ ಅವರು, ನಾಲ್ಕನೇ ಬಾರಿಗೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಾರೆ. ಈ ಬಾರಿ 103ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುವ ಮೂಲಕ ಐಪಿಎಸ್ ಅಧಿಕಾರಿಯಾಗುತ್ತಾರೆ. ಪ್ರಸ್ತುತ ಅವರು ಲೋಣಾವಲದಲ್ಲಿ ಎಎಸ್ ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.