ನವದೆಹಲಿ, ಎ30(Daijiworld News/SS): ಕೇಂದ್ರ ಗೃಹ ಇಲಾಖೆಯು ರಾಹುಲ್ ಗಾಂಧಿ ಅವರಿಗೆ ಮಂಗಳವಾರ ನೋಟಿಸ್ ನೀಡಿರುವುದರ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿ ಕಾರಿದ್ದಾರೆ.
ರಾಹುಲ್ ಗಾಂಧಿ ಅವರು ಸ್ಪರ್ಧೆ ಮಾಡಿರುವ ಉತ್ತರ ಪ್ರದೇಶದ ಅಮೇಥಿಯಲ್ಲಿ ಮಂಗಳವಾರ ಪ್ರಚಾರ ನಡೆಸುತ್ತಿದ್ದ ಪ್ರಿಯಾಂಕಾ ಗಾಂಧಿ ಅವರು ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಬ್ರಿಟನ್ ಪೌರತ್ವ ಹೊಂದಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಭಾರತೀಯ ಎಂಬುದು ಭಾರತಕ್ಕೇ ಗೊತ್ತು ಎಂದು ಹೇಳಿದ್ದಾರೆ.
ಮೂರ್ಖತನದ ಚರ್ಚೆಗಳನ್ನು ನಾನೆಂದೂ ಕೇಳಿರಲಿಲ್ಲ. ರಾಹುಲ್ ಗಾಂಧಿ ಭಾರತದಲ್ಲೇ ಹುಟ್ಟಿದ್ದು, ಭಾರತದಲ್ಲೇ ಬೆಳೆದದ್ದು. ಇದು ಇಡೀ ಭಾರತಕ್ಕೆ ತಿಳಿದ ವಿಚಾರ ಎಂದು ಅವರು ಹೇಳಿದ್ಧಾರೆ.
ರಾಹುಲ್ ಗಾಂಧಿ ಕಂಪನಿಯೊಂದರ ನೋಂದಣಿ ವೇಳೆ ತಾವು ಬ್ರಿಟನ್ ಪೌರತ್ವ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ ಎಂದು ಆರೋಪಿಸಿ, ರಾಜ್ಯಸಭೆಯ ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಗೃಹ ಇಲಾಖೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗೃಹ ಇಲಾಖೆಯು ಮಂಗಳವಾರ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ಕೇಳಿದೆ. ಮಾತ್ರವಲ್ಲ, ನೋಟಿಸ್ಗೆ ಹದಿನೈದು ದಿನಗಳಲ್ಲಿ ಉತ್ತರ ನೀಡುವಂತೆಯೂ ರಾಹುಲ್ ಅವರಿಗೆ ಸೂಚಿಸಿದೆ.