ನವದೆಹಲಿ, ಮಾ 19(DaijiworldNews/AK):ಯೋಗ ಗುರು ಬಾಬಾ ರಾಮ್ದೇವ್ ಮತ್ತು ಪತಂಜಲಿ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ಅವರಿಗೆ ಸುಪ್ರೀಂಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಶೋಕಾಸ್ ನೋಟಿಸ್ ಗೆ ಉತ್ತರ ನೀಡದ ಹಿನ್ನೆಲೆ ಮುಂದಿನ ವಿಚಾರಣೆಯಲ್ಲಿ ಖುದ್ದು ಹಾಜರಾಗುವಂತೆ ಕೋರ್ಟ್ ತಾಕೀತು ಮಾಡಿದೆ. ತಪ್ಪು ಮಾಹಿತಿಯೊಂದಿಗೆ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿ ಪತಂಜಲಿ ವಿರುದ್ಧ ಭಾರತೀಯ ವೈದ್ಯಕೀಯ ಸಂಸ್ಥೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹಿಮಕೊಹ್ಲಿ ನೇತೃತ್ವದ ದ್ವಿಸದಸ್ಯ ಪೀಠ, ರಾಮ್ದೇವ್ ಮತ್ತು ಪತಂಜಲಿ ಅಧ್ಯಕ್ಷ ಆಚಾರ್ಯ ಬಾಲಕೃಷ್ಣ ಅವರು ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆ, 1954 ರ ಸೆಕ್ಷನ್ 3 ಮತ್ತು 4 ಅನ್ನು ಪ್ರಾಥಮಿಕವಾಗಿ ಉಲ್ಲಂಘಿಸಿದ್ದಾರೆ ಎಂದು ಟೀಕಿಸಿತ್ತು.
ತಾತ್ಕಾಲಿಕವಾಗಿ ಪತಂಜಲಿ ಜಾಹೀರಾತು ನಿರ್ಬಂಧಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.ಆದರೆ ಸುಪ್ರೀಂಕೋರ್ಟ್ ನೋಟಿಸ್ಗೆ ಉತ್ತರಿಸದ ಹಿನ್ನೆಲೆ ಸುಪ್ರೀಂಕೋರ್ಟ್ ನಮ್ಮ ಆದೇಶಗಳನ್ನು ನಿರ್ಲಕ್ಷ್ಯಿಸಿದ್ದೀರಿ. ಈ ಹಿನ್ನಲೆ ಬಾಬಾ ರಾಮ್ದೇವ್ ಮತ್ತು ಪತಂಜಲಿ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ಕೋರ್ಟ್ ಮುಂದೆ ಹಾಜರಾಗಬೇಕು ಎಂದು ಸೂಚಿಸಿದರು.
ಹಿಂದಿನ ವಿಚಾರಣೆಯಲ್ಲಿ ನ್ಯಾಯಾಲಯವು ಪತಂಜಲಿ ಆಯುರ್ವೇದ ಔಷಧಿಗಳ ಜಾಹೀರಾತುಗಳಿಗೆ ತಾತ್ಕಾಲಿಕ ನಿಷೇಧವನ್ನು ವಿಧಿಸಿತ್ತು ಮತ್ತು ತಪ್ಪುದಾರಿಗೆಳೆಯುವ ಜಾಹೀರಾತು ನೀಡಿದ್ದಕ್ಕಾಗಿ ಅದರ ಸಂಸ್ಥಾಪಕರಾದ ರಾಮ್ದೇವ್ ಮತ್ತು ಬಾಲಕೃಷ್ಣ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿತು. ಯಾವುದೇ ಪ್ರಾಯೋಗಿಕ ಪುರಾವೆಗಳಿಲ್ಲದಿದ್ದರೂ ಪತಂಜಲಿ ಔಷಧಿಗಳು ಕೆಲವು ಕಾಯಿಲೆಗಳನ್ನು ಗುಣಪಡಿಸುತ್ತವೆ ಎಂದು ಸುಳ್ಳು ಹೇಳಿಕೆ ನೀಡುವ ಮೂಲಕ ದೇಶವನ್ನು ದಾರಿ ತಪ್ಪಿಸುತ್ತಿದೆ ಎಂದು ಸುಪ್ರೀಂಕೋರ್ಟ್ ಟೀಕಿಸಿತ್ತು.