ಬೆಂಗಳೂರು,ಏ 30 (Daijiworld News/MSP): ಬಂಗಾಲಕೊಲ್ಲಿಯ ವಾಯುಭಾರ ಕುಸಿತವು ಫನಿ ಚಂಡಮಾರುತವಾಗಿ ಬದಲಾಗಿ ತನ್ನ ತೀವ್ರತೆ ಮತ್ತಷ್ಟು ಹೆಚ್ಚಿಕೊಳ್ಳುತ್ತಿರುವುದರಿಂದ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಚಂಡಮಾರುತದ ಪರಿಣಾಮ ಕೇರಳ ಮತ್ತು ಒಡಿಶಾದಲ್ಲಿ ಹೆಚ್ಚಿನ ಮಳೆ ಸುರಿಯಲಿದ್ದು, ಕರ್ನಾಟಕ, ತಮಿಳುನಾಡು, ಆಂಧ್ರ ಸಹಿತ ಹಲವೆಡೆ ಮಳೆಯಾಗಲಿದೆ. ಗುರುವಾರದ ಬಳಿಕ ಚಂಡಮಾರುತದ ತೀವ್ರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಭಾರತೀಯ ನೌಕಾಪಡೆ, ವಾಯುಪಡೆ ಮತ್ತು ಭೂಸೇನೆ ಕೂಡ ಎಲ್ಲ ರೀತಿಯ ತುರ್ತು ಸವಾಲುಗಳಿಗೆ ಸನ್ನದ್ಧವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಗಾಳ ಕೊಲ್ಲಿಯ ಈಶಾನ್ಯ ಭಾಗದಿಂದ 950 ಕಿ.ಮೀ ದೂರದಿಂದ ಈ ಚಂಡಮಾರುತ ಸಾಗಿ ಬರಲಿದೆ. ಮಳೆ ಹಾಗೂ ಚಂಡಮಾರುತದ ಪ್ರಭಾವ ಹೆಚ್ಚಾಗಿರುವುದರಿಂದ ಹೈ ಅಲರ್ಟ್ ರಾಜ್ಯಗಳ ಕರಾವಳಿಯ ಮೀನುಗಾರರಿಗೆ ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ.