ಬೆಂಗಳೂರು,ಏ 30 (Daijiworld News/MSP): ಇನ್ನು ಮುಂದೆ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನದಲ್ಲಿ ಆರೋಗ್ಯಾಧಿಕಾರಿಗಳು ತಪಾಸಣೆ ಮಾಡದೆ ಭಕ್ತರಿಗೆ ಪ್ರಸಾದ ವಿತರಿಸುವಂತಿಲ್ಲ. ಹೀಗೊಂದು ನಿಯಮ ಶೀಘ್ರದಲ್ಲೇ ಜಾರಿಗೆ ಬರುವ ಸಾಧ್ಯತೆ ಇದೆ.
ಚಾಮರಾಜನಗರ ಜಿಲ್ಲೆಯ ಸುಳವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ 17 ಮಂದಿ ಮೃತಪಟ್ಟು 100ಕ್ಕೂ ಹೆಚ್ಚು ಭಕ್ತರು ತೀವ್ರ ಅಸ್ವಸ್ಥಗೊಂಡ ಪ್ರಕರಣ ಹಾಗೂ ವಿಷ ಪ್ರಸಾದ ಸೇವನೆ ಇತರ ಘಟನೆಗಳ ಬಳಿಕ ಹೊಸ ಮಾರ್ಗಸೂಚಿಯನ್ನು ಅನುಷ್ಠಾನಕ್ಕೆ ಮುಜರಾಯಿ ಇಲಾಖೆ ಮುಂದಾಗಿದೆ. ಹೀಗಾಗಿ ಮುಜರಾಯಿ ಇಲಾಖೆಯ ಹೊಸ ನಿಯಮ ಜಾರಿಗೆ ಬಂದರೆ, ಇನ್ಮುಂದೆ ದೇವಸ್ಥಾನದಲ್ಲಿ ಕಡ್ಡಾಯವಾಗಿ ಆರೋಗ್ಯಾಧಿಕಾರಿ ಪ್ರಸಾದವನ್ನು ತಪಾಸಣೆ ನಡೆಸಿದ ನಂತರವಷ್ಟೇ ಭಕ್ತರಿಗೆ ವಿತರಣೆ ಮಾಡಬೇಕಾಗುತ್ತದೆ. ಇನ್ನು ಇಲಾಖೆ ವ್ಯಾಪ್ತಿಗೆ ಬಾರದೆ ಇರೋ ದೇವಸ್ಥಾನಗಳಲ್ಲಿ ತಪಾಸಣೆ ಕಡ್ಡಾಯವಲ್ಲದಿದ್ದರೂ, ಅಲ್ಲಿನ ಸ್ಥಳೀಯರೇ ಸ್ವಯಂ ಪ್ರೇರಿತರಾಗಿ ಪ್ರಸಾದವನ್ನು ತಪಾಸಣೆ ನಡೆಸಿ ವಿತರಣೆ ನಡೆಸುವುದು ಸೂಕ್ತ ಎಂದು ಸರ್ಕಾರ ಮನವಿ ಮಾಡಿಕೊಳ್ಳಲಿದೆ.
ರಾಜ್ಯದಲ್ಲಿ ವಿಷ ಪ್ರಸಾದ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರ್ಕಾರ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಹೊಸ ನಿಯಮಾವಳಿಗಳನ್ನು ಜಾರಿಗೊಳಿಸಲಿದೆ.