ಬೆಳಗಾವಿ, ಮಾ 20(DaijiworldNews/ AK): ಮನೆಯ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿ ಚುನಾವಣ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು ಮಾಡಿದ ಬೆನ್ನಲ್ಲೇ ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಾನು ಅಂಗನವಾಡಿ ಕಾರ್ಯಕರ್ತೆಯರ ಸಭೆ ನಡೆಸಿಲ್ಲ, ಕೆಲಸದ ಒತ್ತಡ ಕಡಿಮೆ ಮಾಡಲು ಮನವಿ ಸಲ್ಲಿಸಲು ಬಂದಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.
ನೀತಿ ಸಂಹಿತೆ ಉಲ್ಲಂಘಿಸಿ ಸಚಿವರು ಅಂಗನವಾ ಡಿ ಕಾರ್ಯಕರ್ತೆಯರ ಸಭೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಚುನಾವಣ ನೀತಿ ಸಂಹಿತೆ ಉಲ್ಲಂಘಿಸಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಕೆಲಸದ ಒತ್ತಡ ಜಾಸ್ತಿಯಾಗಿದೆ. ಇತ್ತೀಚೆಗೆ ಪಲ್ಸ್ ಪೋಲಿಯೋ, ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಸರ್ವೆ ಮಾಡಿದ್ದರು. ಈಗ ಬಿಎಲ್ಒ ಆಗಿ ಕೆಲಸ ಮಾಡ್ತಿದ್ದಾರೆ. ಬಿಎಲ್ಒ ಆಗಲು ನಮಗೆ ತೊಂದರೆ ಆಗುತ್ತಿದೆ ಎಂದು ನನಗೆ ಹೇಳಲು ಬಂದಿದ್ದಾರೆ. ಆದರೆ, ನಾನೇ ಅವರಿಗೆ ತಿಳಿ ಹೇಳಿ ಕೆಲಸ ಮಾಡಲು ಸೂಚಿಸಿದೆ ಎಂದರು.
ಚುನಾವಣೆ ವೇಳೆ ದೂರು ನೀಡುವುದು ಸರ್ವೆ ಸಾಮಾನ್ಯ. ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ನಾನು ನಿಯಮ ಉಲ್ಲಂಘಿಸಿಲ್ಲ. ನಾನು ದೇಶದ ಕಾನೂನಿಗೆ ಗೌರವ ಕೊಡುತ್ತೇನೆ. ನನಗೆ ಇದು ಐದನೇ ಚುನಾವಣೆ. ನನಗೆ ಚುನಾವಣೆ ಎದುರಿಸುವುದು ಹೇಗೆ ಎಂಬುದು ಗೊತ್ತಿದೆ ಎಂದರು
ಬೆಳಗ್ಗೆ ಮಾ .20 ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಿವಾಸದಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿದ್ದರು.ಜಿಲ್ಲಾ ಚುನಾವಣಾಧಿಕಾರಿ ನಿತೇಶ ಪಾಟೀಲ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರನ್ನು ಅಲ್ಲಿಂದ ಕಳಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.