ನವದೆಹಲಿ,ಏ 30 (Daijiworld News/MSP): ಕೊನೆಗೂ ರಾಹುಲ್ ಗಾಂಧಿ ‘ಚೌಕಿದಾರ್ ಚೋರ್ ಹೈ’ ಅನ್ನೋ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ. ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತ ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ ವಿಚಾರದಲ್ಲಿ ತಪ್ಪನ್ನು ಒಪ್ಪಿಕೊಳ್ಳುವಂತೆ ಸುಪ್ರೀಂಕೋರ್ಟ್ ತಾಕೀತು ಮಾಡಿದ ಹಿನ್ನಲೆಯಲ್ಲಿ ಹೊಸ ಅಫಿಡೆವಿಟ್ ಮೂಲಕ ಕ್ಷಮೆಯಾಚಿಸುವುದಾಗಿ ರಾಹುಲ್ ಗಾಂಧಿ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಈ ಹಿಂದೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಮೂರು ದೋಷಗಳಿರುವುದನ್ನು ಒಪ್ಪಿಕೊಂಡ ರಾಹುಲ್ ಪರ ವಕೀಲರು ರಾಹುಲ್ ಗಾಂಧಿ ಕ್ಷಮೆಯಾಚಿಸುವುದರೊಂದಿಗೆ ಹೊಸ ಅಫಿಡವಿಟ್ ಸಲ್ಲಿಸುವುದಾಗಿ ಹೇಳಿದ್ದಾರೆ.ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದ್ದು, ಮತ್ತೊಂದು ಅಫಿಡವಿಟ್ ಸಲ್ಲಿಸುವುದಕ್ಕೆ ಅವಕಾಶ ನೀಡಿದೆ. ವಿಚಾರಣೆಯನ್ನು ಮೇ 6 ಕ್ಕೆ ನ್ಯಾಯಾಲಯ ಮುಂದೂಡಿದೆ.
ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಈ ಹಿಂದೆ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ ಗೆ ಚೌಕಿದಾರ್ ಚೋರ್ ಹೈ ಹೇಳಿಕೆ ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದರು. ಆದರೆ ವಿಚಾರಣಾ ಪೀಠ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಅರ್ಜಿಯಲ್ಲಿ ಕ್ಷಮೆ ಕೇಳುತ್ತೇನೆ ಎಂಬುದಾಗಿ ಇಲ್ಲ ಕೆಲವೊಂದು ಬಾರಿ ವಿಷಾದ ಅಂತಾರೆ ಇನ್ನೊಂದು ಬಾರಿ ಇಲ್ಲ ಅಂತಾರೆ, ಹೀಗಾಗಿ ಇದಕ್ಕೆ ಸ್ಪಷ್ಟನೆ ನೀಡಿ ರಾಹುಲ್ ಪರ ವಕೀಲರಿಗೆ ನ್ಯಾಯಾಲಯ ತಿಳಿಸಿತು. ಆ ಬಳಿಕ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ ನಲ್ಲಿ ತನ್ನಿಂದ ತಪ್ಪಾಗಿರುವುದಾಗಿ ಒಪ್ಪಿಕೊಂಡು ಕ್ಷಮೆಯಾಚಿಸಿ ಹೊಸ ಅಫಿಡೆವಿಟ್ ಸಲ್ಲಿಸುವುದಾಗಿ ತಿಳಿಸಿದ್ದಾರೆ.