ಚಿತ್ರದುರ್ಗ,ಏ30(DaijiworldNews/AZM):ತನ್ನ ಮಗಳು ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಅಂಕ ಗಳಿಸಿದ ಸುದ್ಧಿ ಕೇಳಿ ಆ ತಂದೆಯ ಸಂತೋಷಕ್ಕೆ ಪರವೇ ಇರಲಿಲ್ಲ. ತನ್ನ ಮಗಳ ಸಂತೋಷದಲ್ಲಿ ಭಾಗಿಯಾಗಲು ಆ ತಂದೆ ಸ್ವೀಟ್ಸ್ ತರಲು ಬೇಕರಿಗೆ ಹೋಗಿದ್ದರು. ಆದರೆ ಒಂದೇ ಕ್ಷಣದಲ್ಲಿ ಖುಷಿಯ ವಾತಾವರಣ ನೋವಿನ ಸಾಗರಕ್ಕೆ ಬದಲಾಯಿತು.
ಮೃತಪಟ್ಟವರನ್ನು ಸಿದ್ಧೇಶ್(45) ಎಂದು ಗುರುತಿಸಲಾಗಿದೆ. ಎಸ್ ಎಸ್ ಎಲ್ ಸಿಯಲ್ಲಿ ತಮ್ಮ ಮಗಳು ಉತ್ತಮ ಅಂಕಗಳಿಸಿದ ಹಿನ್ನಲೆ ಆ ಖುಷಿಯನ್ನು ಕುಟುಂಬಸ್ಥರ ಜೊತೆ ಹಂಚಿಕೊಳ್ಳಲೆಂದು ಫಲಿತಾಂಶ ತಿಳಿದೊಡನೇ ತಂದೇ ಸ್ವೀಟ್ಸ್ ತರಲೆಂದು ಬೇಕರಿಗೆ ಹೊರಟಿದ್ದರು. ಆದರೆ ಸ್ವೀಟ್ಸ್ ತೆಗೆದುಕೊಂಡು ಹಿಂದಿರುಗಿ ಬರುವ ವೇಳೆ ಕಡಬನಕಟ್ಟೆ ಸಮೀಪ ಅವರು ಸಂಚರಿಸುತ್ತಿರುವ ಬೈಕ್ ಟೆಂಪೋಗೆ ಡಿಕ್ಕಿ ಹೊಡೆದು ಸಿದ್ಧೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂತೋಷದ ಆ ಕ್ಷಣದಲ್ಲಿ ಬಂದ ಒಂದು ಕೆಟ್ಟ ಗಳಿಗೆ ಆ ತಂದೆಯ ಪ್ರಾಣವನ್ನೇ ಕಸಿದುಕೊಂಡು ಹೋಯಿತು.
ಇತ್ತಕಡೆ ತಂದೆ ತನಗಾಗಿ ಸಿಹಿತಿಂಡಿ ಹಿಡಿದುಕೊಂಡು ಬರುತ್ತಾರೆ ಎಂದು ಕಾದುಕುಳಿತ ಮಗಳಿಗೆ ತಂದೆಯ ಮೃತದೇಹ ಬಂದಿದೆ. ಎಂತಹ ಕಲ್ಲು ಮನಸ್ಸು ಕರಗಿ ಹೋಗುವ ಹೃದಯವಿದ್ರಾವಕ ಘಟನೆಗೆ ಇಂದು ಚಿತ್ರದುರ್ಗ ಸಾಕ್ಷಿಯಾಗಿದೆ.