ಬೆಂಗಳೂರು, ಮಾ 21(DaijiworldNews/ AK):ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲೇ ಅತಿ ಹೆಚ್ಚು ಯುವ, ಮಹಿಳಾ, ವಿದ್ಯಾವಂತ, ಪ್ರಜ್ಞಾವಂತರಿಗೆ, ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಇವರೆಲ್ಲಾ ಈ ಬಾರಿ ಗೆದ್ದು ಭವಿಷ್ಯದಲ್ಲಿ ಪಕ್ಷದ ದೊಡ್ಡ ನಾಯಕರಾಗಿ ಬೆಳೆಯುತ್ತಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,ಕೇವಲ ಸಚಿವರ ಮಕ್ಕಳಿಗೆ ಟಿಕೆಟ್ ನೀಡಿದ್ದು, ಕಾರ್ಯಕರ್ತರಿಗೆ ನೀಡಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಯಕರ್ತರಿಗೂ ಟಿಕೆಟ್ ನೀಡಿದ್ದೇವೆ. ಯಾರು ಟಿಕೆಟ್ ಕೇಳಿದ್ದಾರೋ ಅವರಿಗೆ ನೀಡಿದ್ದೇವೆ. ಯಾರು ಕೇಳುವುದಿಲ್ಲವೋ ಅವರಿಗೆ ನೀಡಲು ಆಗುವುದಿಲ್ಲ. ಮೊದಲು ಆಸಕ್ತಿ, ಛಲ ಇರಬೇಕು.
ಇಂದು ಸಂಜೆ ಅಂತಿಮ ಪಟ್ಟಿ:
ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು ತಮಿಳುನಾಡು, ಉತ್ತರಪ್ರದೇಶದ ಪಟ್ಟಿ ಅಂತಿಮಗೊಳ್ಳುತ್ತಿದ್ದು ಇಂದು (ಗುರುವಾರ) ಸಂಜೆ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತದೆ. ಇಂದು ಸಂಜೆಯೇ ಎಲ್ಲಾ ಅಭ್ಯರ್ಥಿಗಳು ಮತ್ತು ಮಂತ್ರಿಗಳ ಜೊತೆ ಸಭೆ ಇಟ್ಟುಕೊಂಡಿದ್ದೇವೆ” ಎಂದರು.ನಾಲ್ಕು ಕ್ಷೇತ್ರಗಳಲ್ಲಿ ಗೊಂದಲ ಉಂಟಾಗಿದೆ ಎಂದಾಗ ನಾಲ್ಕು ಕ್ಷೇತ್ರಗಳ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಜೂಮ್ ಮೂಲಕ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಮೇಕೆದಾಟು ಕಟ್ಟಲೆಂದೇ ಜಲ ಸಂಪನ್ಮೂಲ ಸಚಿವನಾಗಿದ್ದೇನೆಡಿಎಂಕೆ ತನ್ನ ಪ್ರನಾಳಿಕೆಯಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟಲು ಬಿಡುವುದಿಲ್ಲ ಎಂದು ಹೇಳಿದೆ ಎಂದು ಕೇಳಿದಾಗ “ಅವರ ರಾಜ್ಯದಲ್ಲಿ ಅವರು ಏನಾದರೂ ಮಾಡಿಕೊಳ್ಳಲಿ. ನಾನು ಮೇಕೆದಾಟು ಕಟ್ಟಲೆಂದೇ ಜಲ ಸಂಪನ್ಮೂಲ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಅವರ ಹೋರಾಟ ಅವರು ಮಾಡಲಿ. ಕಾವೇರಿ ನೀರು ನಿರ್ವಹಣಾ ಸಮಿತಿಗೆ ನೀರಿನ ಸಮಸ್ಯೆಯ ಅರಿವಿದೆ. ಅವರು ನಮಗೆ ನ್ಯಾಯ ಕೊಡಲೇ ಬೇಕು. ಕೋರ್ಟಿನಲ್ಲೂ ನಮಗೆ ನ್ಯಾಯ ಸಿಗುತ್ತದೆ” ಎಂದು ಹೇಳಿದರು.ಮೇಕೆದಾಟು ಯೋಜನೆ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ. ಎರಡೂ ರಾಜ್ಯಗಳಿಗೆ ಉಪಯೋಗವಾಗುತ್ತದೆ. ಇಡೀ ದೇಶದ ಜನರು ಕರ್ನಾಟಕದಲ್ಲಿ ಇದ್ದಾರೆ. ಈ ಯೋಜನೆಯಿಂದ ಇಡೀ ದೇಶದ ಜನರಿಗೆ ಉಪಯೋಗವಾಗುತ್ತದೆ. ನಮ್ಮ ಸಹೋದರರು ಬೆಂಗಳೂರಿನಲ್ಲೂ ಇದ್ದಾರೆ. ಅವರಿಗೂ ಒಳ್ಳೆಯದು ಆಗಲಿ ಎಂದು ಮೇಕೆದಾಟು ಯೋಜನೆಯ ಪರವಾಗಿ ತಮಿಳುನಾಡು ಮಾತನಾಡುವ ಒಳ್ಳೆಯ ಕಾಲ ಬರಲಿದೆ ಎಂದರು.
ಬಿಜೆಪಿ ಸ್ವಚ್ಚಗೊಳಿಸುತ್ತೇನೆ ಎನ್ನುವ ಸದಾನಂದಗೌಡರ ಹೇಳಿಕೆ ಬಗ್ಗೆ ಉತ್ತರಿಸಿದ ಅವರು, ಅನುಭವದಿಂದ ಈ ಮಾತನ್ನು ಹೇಳಿದ್ದಾರೆ. ಅನುಭವ ಮನುಷ್ಯನನ್ನು ಮಾಗಿಸುತ್ತದೆ ಎಂದರು.
ಧಾರ್ಮಿಕ ಸಂಸ್ಥೆಗಳ ಮಸೂದೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ ಎಂದಾಗ “ಈ ವಿಚಾರದಲ್ಲಿ ಬಿಜೆಪಿಯದ್ದು ಇಬ್ಬಗೆಯ ನೀತಿ. ಸಣ್ಣ, ಸಣ್ಣ ದೇವಾಲಯಗಳ, ಅರ್ಚಕರ ಅಭಿವೃದ್ದಿಗೆ ಪೂರಕವಾಗಿದ್ದ ಈ ಮಸೂದೆಯನ್ನು ಬಿಜೆಪಿ ವಿರೋಧಿಸಿ ತನ್ನ ನಿಜ ಬಣ್ಣವನ್ನು ಬಯಲು ಮಾಡಿಕೊಂಡಿದೆ. ಮುಂದಿನ ಜೂನ್ ತಿಂಗಳ ಅಧಿವೇಶನದಲ್ಲಿ ಬಹುಮತ ಸಿಗಲಿದೆ” ಎಂದು ಉತ್ತರಿಸಿದರು.