ಬೆಂಗಳೂರು,ಏ30(DaijiworldNews/AZM): ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಸಿಎಂ ಕುಮಾರಸ್ವಾಮಿಯವರು ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.
ಅನುತ್ತೀರ್ಣರಾದ ವಿದ್ಯಾರ್ಥಿಗಳು ನಿರಾಸೆ ಹೊಂದುವ ಅಗತ್ಯವಿಲ್ಲ. ಮುಂದಿನ ಬಾರಿ ಹೆಚ್ಚಿನ ಪರಿಶ್ರಮ ವಹಿಸಿ ಪರೀಕ್ಷೆ ಎದುರಿಸಿ, ಯಶಸ್ವಿಯಾಗಿ ಎಂದು ಅವರು ಧೈರ್ಯ ಹೇಳಿದ್ದಾರೆ. ಇನ್ನು ಇಡೀ ಪರೀಕ್ಷಾ ಪ್ರಕ್ರಿಯೆಯನ್ನು ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಯಶಸ್ವಿಯಾಗಿ ನಿರ್ವಹಿಸಿದ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ತಂತ್ರಜ್ಞಾನದ ನೆರವು ಹಾಗೂ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ದೊರೆತಾಗ ಪರಿಣಾಮಕಾರಿ ಕಾರ್ಯನಿರ್ವಹಣೆ ಸಾಧ್ಯ ಎನ್ನುವುದಕ್ಕೆ ಈ ವರ್ಷದ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷಾ ಪ್ರಕ್ರಿಯೆ ನಿರ್ವಹಣೆ ಉತ್ತಮ ನಿದರ್ಶನ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳು ಉತ್ತಮ ಸಾಧನೆ ಮಾಡಿರುವುದಕ್ಕೆ ಮುಖ್ಯಮಂತ್ರಿ ಹರ್ಷ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಶಾಲೆಗಳ ಮಕ್ಕಳು ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳು ಅತ್ಯುತ್ತಮ ಸಾಧನೆ ತೋರಬಲ್ಲರು ಎಂಬುದಕ್ಕೆ ಇದು ನಿದರ್ಶನ. ಯಾವುದೇ ಸರ್ಕಾರಿ ಶಾಲೆ ಶೂನ್ಯ ಫಲಿತಾಂಶ ದಾಖಲಿಸದೆ ಇರುವುದು ಹಾಗೂ ಶೇ. 100 ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ 102 ರಿಂದ 593ಕ್ಕೆ ಹೆಚ್ಚಳವಾಗಿರುವುದು ಹೆಮ್ಮೆಯ ವಿಷಯ ಎಂದು ಅವರು ತಿಳಿಸಿದರು.