ಅಮ್ದಂಗಾ,ಏ30(DaijiworldNews/AZM):ಪ್ರಧಾನಿ ನರೇಂದ್ರ ಮೋದಿ ಹಿಟ್ಲರ್ ನ ತಾತ ಎಂದು ಮಮತಾ ಬ್ಯಾನರ್ಜಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಬಾರಕ್ಪುರ ಲೋಕಸಭೆ ಕ್ಷೇತ್ರದ ಅಮ್ದಂಗಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಈ ಕುರಿತು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ 'ಅತ್ಯಂತ ದೊಡ್ಡ ಫ್ಯಾಸಿಸ್ಟ್'. 'ಹಿಟ್ಲರ್ನ ತಾತ' ಎಂದೂ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಆದರೆ, ತಮಗೆ ಅವರ ಬಗ್ಗೆ ಯಾವುದೇ ಭಯವಿಲ್ಲ ಎಂದಿದ್ದಾರೆ.
ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ತ್ರಿವೇದಿ ಅವರಿಗೆ ಮತ ಹಾಕುವಂತೆ ಕರೆ ನೀಡಿದ ಮಮತಾ, 'ಗದ್ದರ್'ಗೆ (ಬಿಜೆಪಿ ಅಭ್ಯರ್ಥಿ) ಪಾಠ ಕಲಿಸುವಂತೆ ಕೋರಿದರು.
'ನಾನು ಅನೇಕ ಪ್ರಧಾನಿಗಳ ಆಡಳಿತಾವಧಿಯಲ್ಲಿ ಕೆಲಸ ಮಾಡಿದ್ದೇನೆ. ಆದರೆ ಈಗ ಪ್ರಧಾನಿ ಕುರ್ಚಿಯ ಮೇಲೆ ಕುಳಿತಿರುವವರು ಅತ್ಯಂತ ಅನರ್ಹ. ಪ್ರಧಾನಿಗೆ ಮೂಲ ರಾಜಕೀಯ ಕೃತಜ್ಞತೆಗಳೇ ತಿಳಿದಿಲ್ಲ. ಅವರು ಬಳಸುವ ಭಾಷೆಯನ್ನು ನೋಡಿ. ಅವರಿಗೆ ಬಂಗಾಳಿ ಸಂಸ್ಕೃತಿ ತಿಳಿದಿಲ್ಲ. ಪ್ರತಿಯೊಬ್ಬರೂ ತನ್ನ ಸೇವಕ ಎಂದು ಅವರು ಭಾವಿಸಿದ್ದಾರೆ' ಎಂದು ಮೋದಿ ವಿರುದ್ಧ ಕಿಡಿಕಾರಿದರು.