ಬೆಂಗಳೂರು, ಮಾ 23(DaijiworldNews/MS): ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಮಾರ್ಚ್ ಒಂದರಿಂದ ಆರಂಭವಾಗಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ಶುಕ್ರವಾರ ಮುಕ್ತಾಯಗೊಂಡಿದೆ.
ಇಂದಿನಿಂದ ಮೌಲ್ಯಮಾಪನ ಪ್ರಕ್ರಿಯೆ ಆರಂಭಗೊಳ್ಳಲಿದ್ದು ಮುಖ್ಯ ಮೌಲ್ಯಮಾಪಕರು ಮೌಲ್ಯಮಾಪನ ಕೇಂದ್ರಗಳಿಗೆ ಹಾಜರಾಗಿ ಮೌಲ್ಯಮಾಪನ ಪ್ರಕ್ರಿಯೆ ಆರಂಭಿಸಲಿದ್ದಾರೆ.ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಮೂಲಗಳ ಪ್ರಕಾರ ಸುಮಾರು 55 ಸಾವಿರ ಮಂದಿ ಮೌಲ್ಯಮಾಪನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದು 38 ಸಾವಿರ ಮಂದಿ ಮೌಲ್ಯಮಾಪಕರಿಗೆ ಮೌಲ್ಯಮಾಪನಕ್ಕೆ ಹಾಜರಾಗುವಂತೆ ಸೂಚನೆ ಕಳುಹಿಸಲಾಗಿದೆ.
ಇನ್ನೆರಡು ವಾರ್ಷಿಕ ಪರೀಕ್ಷೆಗಳಿರುವುದು ಮತ್ತು ರಾಜ್ಯದಲ್ಲಿ ಎರಡು ಹಂತದಲ್ಲಿ (ಏ.26 ಮತ್ತು ಮೇ 7) ರಂದು ಲೋಕಸಭಾ ಚುನಾವಣೆಗಳಿರುವುದರಿಂದ ಆದಷ್ಟು ತ್ವರಿತವಾಗಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶ ನೀಡಬೇಕೆಂದು ಪರೀಕ್ಷಾ ಮಂಡಳಿ ಬಯಸಿದೆ.