ಮುಂಬೈ, ಮಾ 23(DaijiworldNews/MS): ಮುಂಬೈನಲ್ಲಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಭೂಗತ ಪಾತಕಿ ಪ್ರಸಾದ್ ಪೂಜಾರಿಯನ್ನು ಚೀನಾ ಗಡಿಪಾರು ಮಾಡಿದ್ದು, ಪೊಲೀಸರು ಈತನನ್ನು ದೇಶಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಎರಡು ದಶಕದ ಹಿಂದೆ ಚೀನಾದಲ್ಲಿ ತಲೆಮರೆಸಿಕೊಂಡಿದ್ದ, ಕೊಲೆ, ಹಫ್ತಾ ವಸೂಲಿ ಸೇರಿ ಮುಂಬೈನ ಪಾತಕ ಲೋಕದಲ್ಲಿ ತೊಡಗಿಸಿಕೊಂಡಿದ್ದ ಈತನನ್ನು ಕಳೆದ ವರ್ಷ ಚೀನಾ ನಕಲಿ ಪಾಸ್ಪೋರ್ಟ್ ಆರೋಪದಡಿ ಬಂಧಿಸಿತ್ತು. ಚೀನಾದ ಯುವತಿಯನ್ನು ಮದುವೆಯಾಗಿ ಅಲ್ಲಿಯೇ ಉಳಿದುಕೊಂಡಿದ್ದ ಪ್ರಸಾದ್ ಪೂಜಾರಿ ಛೋಟಾ ರಾಜನ್ ಬಂಧನದ ಬಳಿಕ ತನ್ನದೇ ನೆಟ್ವರ್ಕ್ ಬೆಳೆಸಿಕೊಂಡು ಮುಂಬೈನಲ್ಲಿ ಉದ್ಯಮಿಗಳನ್ನು ಹಣಕ್ಕಾಗಿ ಪೀಡಿಸುತ್ತಿದ್ದ. ಚೀನಾದಾಕೆಯನ್ನು ಮದುವೆಯಾಗಿದ್ದ ಕಾರಣ ಈತನ ಗಡಿಪಾರು ಪ್ರಕ್ರಿಯೆ ವಿಳಂಬವಾಗಿತ್ತು. ವಿಕ್ರೋಲಿಯ ಟ್ಯಾಗೋರ್ ನಗರ ನಿವಾಸಿಯಾಗಿದ್ದ ಪ್ರಸಾದ್ ದಶಕದ ಹಿಂದೆ ಚೀನಾಕ್ಕೆ ಪಲಾಯನ ಮಾಡಿದ್ದ ಈತನ ಬಂಧನಕ್ಕಾಗಿ ಮುಂಬೈ ಪೊಲೀಸರು ಇಂಟರ್ ಪೋಲ್ ನಲ್ಲಿ ರೆಡ್ ಕಾರ್ನರ್ ನೋಟೀಸ್ ಹೊರಡಿಸಿದ್ದರು. ಇತ್ತೀಚೆಗೆ ಚೀನಾದಿಂದ ಪತ್ನಿಯ ಜೊತೆಗೆ ಹಾಂಕಾಂಗ್ ತೆರಳಿದ್ದಾಗ ಇಂಟರ್ ಪೋಲ್ ನೋಟಿಸ್ ಆಧಾರದಲ್ಲಿ ಅಲ್ಲಿನ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಇಂದು ಬೆಳಗ್ಗೆ ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳು ಅವರನ್ನು ಚೀನಾದಿಂದ ಮುಂಬೈಗೆ ಕರೆತಂದಿದ್ದರು. ಇದಾದ ಬೆನ್ನಲ್ಲೇ ಆತನನ್ನು ವಿಶೇಷ MCOCA ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕರೆದೊಯ್ದಿದ್ದಾರೆ.