ನವದೆಹಲಿ, ಮಾ 24(DaijiworldNews/AK): ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಡಿ ಕಸ್ಟಡಿಯಲ್ಲಿದ್ದುಕೊಂಡೇ ಸರ್ಕಾರಿ ಆದೇಶ ಹೊರಡಿಸಿದ್ದಾರೆ.
ಈ ಮೂಲಕ ಅರವಿಂದ್ ಕೇಜ್ರಿವಾಲ್ ಇ.ಡಿ ಬಂಧನದಲ್ಲಿದ್ದುಕೊಂಡೇ ಆಡಳಿತ ನಡೆಸುತ್ತಿದ್ದಾರೆ ಎಂದು ಎಎಪಿ ಮೂಲಗಳಿಂದ ಸ್ಪಷ್ಟವಾಗಿದೆ. ಇದು ರಾಷ್ಟ್ರ ರಾಜಧಾನಿಯ ನೀರು ಸರಬರಾಜಿಗೆ ಸಂಬಂಧಿಸಿದ ಆದೇಶವಾಗಿದೆ. ಜಲ ಸಂಪನ್ಮೂಲ ಸಚಿವೆಯೂ ಆಗಿರುವ ಅತಿಶಿ ಅವರಿಗೆ ಟಿಪ್ಪಣಿ ಮೂಲಕ ತಿಳಿಸಿದ್ದಾರೆ. ಅತಿಶಿ ಆದೇಶವನ್ನು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಇಡಿ ಬಂಧನದಲ್ಲಿರುವ ಸಿಎಂ ಜೈಲಿನಲ್ಲಿದ್ದುಕೊಂಡೇ ಸರ್ಕಾರಿ ಆದೇಶ ಹೊರಡಿಸುವ ಬಗ್ಗೆ ಸಚಿವೆ ಅತಿಶಿ ಮಾಹಿತಿ ನೀಡಿದ್ದಾರೆ. ಇದು ನನ್ನ ಕಣ್ಣಲ್ಲಿ ನೀರು ತರಿಸಿದೆ. ಬಂಧನಕ್ಕೊಳಗಾದ ವ್ಯಕ್ತಿ ಈ ಕಷ್ಟದ ಸಮಯದಲ್ಲೂ ತಮ್ಮ ಕುರಿತು ಆಲೋಚಿಸದೇ, ದೆಹಲಿ ಜನರು ಮತ್ತು ಅವರ ಸಮಸ್ಯೆಗಳ ಬಗ್ಗೆ ಮಾತ್ರ ಯೋಚಿಸುತ್ತಿದ್ದಾರೆ ಎಂದು ಭಾವುಕರಾಗಿದ್ದಾರೆ.
ದೆಹಲಿಯ ಕೆಲವು ಭಾಗಗಳಲ್ಲಿ ಜನರು ನೀರು ಮತ್ತು ಒಳಚರಂಡಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ನಾನು ಚಿಂತಿತನಾಗಿದ್ದೇನೆ. ನಾನು ಜೈಲಿನಲ್ಲಿದ್ದೇನೆ ಎಂಬ ಕಾರಣಕ್ಕೆ ಜನರಿಗೆ ತೊಂದರೆ ಆಗಬಾರದು. ನೀರಿನ ಕೊರತೆ ಇರುವ ಸ್ಥಳಗಳಲ್ಲಿ ಟ್ಯಾಂಕರ್ ವ್ಯವಸ್ಥೆ ಮಾಡಿ ಜನರಿಗೆ ಯಾವುದೇ ಸಮಸ್ಯೆಯಾಗದಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಅಗತ್ಯವಿದ್ದರೆ ರಾಜ್ಯಪಾಲರಾದ ವಿ.ಕೆ ಸಕ್ಷೇನಾ ಅವರ ಸಹಾಯ ಪಡೆಯುವಂತೆ ತಮ್ಮ ನಿರ್ದೇಶನದಲ್ಲಿ ತಿಳಿಸಿರುವುದಾಗಿ ಅತಿಶಿ ಹೇಳಿದ್ದಾರೆ.