ಬೆಂಗಳೂರು,ಮಾ 24(DaijiworldNews/AK): ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸೋತು ಸುಣ್ಣವಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಆರೋಪಿಸಿದರು.
ನಗರದ ಚುನಾವಣಾ ಮಾಧ್ಯಮ ಕೇಂದ್ರ ಹೋಟೆಲ್ ಜಿ.ಎಂ. ರಿಜಾಯ್ಸ್ ನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ತಪ್ಪು ಮುಚ್ಚಿಕೊಳ್ಳಲು ಎನ್ಡಿಆರ್ಎಫ್ಗಾಗಿ ಆರ್ಟಿಕಲ್ 32ರ ಅಡಿಯಲ್ಲಿ ಸುಪ್ರೀಂ ಕೋರ್ಟಿಗೆ ಹೋಗುವ ಪ್ರಹಸನವನ್ನು ಅವರು ಆರಂಭಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಚುನಾವಣಾ ನೀತಿಸಂಹಿತೆ ಬಂದ ಬಳಿಕ ಈ ಯತ್ನ ನಡೆದಿದೆ. ಇಲ್ಲಿವರೆಗೆ ಅವರು ನಿದ್ರೆ ಮಾಡುತ್ತಿದ್ದರೇ ಎಂದು ಪ್ರಶ್ನಿಸಿದರು.
ಈ ಪ್ರಹಸನದ ಮೂಲಕ ಜನರ ಗಮನ ಬೇರೆಡೆ ಸೆಳೆದು ಚುನಾವಣೆ ಮುಗಿಸಿಕೊಂಡು ಬಿಡಬೇಕೆಂಬ ಚಿಂತನೆಯನ್ನು ಮಾಡಿದ್ದರೆ ಅದು ಅವರ ಭ್ರಮೆಯಷ್ಟೇ ಎಂದು ನುಡಿದರು.
ರಾಜ್ಯದ ಜನತೆಗೆ ಕುಡಿಯುವ ನೀರು ಕೊಡಲು ಸಿದ್ದರಾಮಯ್ಯರಿಗೆ ಆಗುತ್ತಿಲ್ಲ. ಬೆಂಗಳೂರಿನ ಜನತೆಗೆ, ರಾಜ್ಯದ ಜನರಿಗೆ ಕುಡಿಯುವ ನೀರು ಕೊಡಲು ಇವರಿಗೆ ಆಗುತ್ತಿಲ್ಲ ಎಂದು ಟೀಕಿಸಿದರು.
ಈ ಸರಕಾರ ಹಾಲು ಉತ್ಪಾದಕರಿಗೆ ನೀಡಬೇಕಿದ್ದ 1200 ಕೋಟಿ ರೂ. ಹಾಲಿನ ಪ್ರೋತ್ಸಾಹಧನವನ್ನು ಇಲ್ಲಿನವರೆಗೆ ನೀಡಿಲ್ಲ. ಈ ಸರಕಾರ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ 1 ಸಾವಿರ ಕೋಟಿಗಿಂತ ಹೆಚ್ಚು ಗ್ಯಾಚ್ಯುಟಿ ಮೊತ್ತವನ್ನು ಬಾಕಿ ಉಳಿಸಿಕೊಂಡಿದೆ. ರಾಜ್ಯದಲ್ಲಿ 20 ಲಕ್ಷ ಕಿಮೀಗಿಂತ ಹೆಚ್ಚು ಕ್ರಮಿಸಿದ ಬಸ್ಸುಗಳು ರಸ್ತೆಯಲ್ಲಿ ಓಡಾಡುತ್ತಿವೆ. ಸರಕಾರವೇ ಸಾರಿಗೆ ನಿಯಮ ಉಲ್ಲಂಘಿಸಿದೆ ಎಂದು ಟೀಕಿಸಿದರು.