ಬೆಂಗಳೂರು, ಮಾ 25(DaijiworldNews/AK):ಮೋದಿ ಮೋದಿ ಘೋಷಣೆ ಕೂಗುವ ಯುವಕರು, ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಬೇಕು ಎಂಬ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಬಿಜೆಪಿ ನಾಯಕ ಸಿಟಿ ರವಿ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ತಂಗಡಗಿಯನ್ನು ಸಂಪುಟದಿಂದ ಸಿಎಂ ಸಿದ್ದರಾಮಯ್ಯ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಂಸ್ಕೃತಿಯೇ ಗೊತ್ತಿಲ್ಲದವರಿಗೆ ಕನ್ನಡ ಸಂಸ್ಕೃತಿ ಇಲಾಖೆಯ ಜವಾಬ್ದಾರಿ ನೀಡಿದ್ದಾರೆ. ಸಚಿವರ ಹೇಳಿಕೆ ಇದು ಕನ್ನಡ ಸಂಸ್ಕೃತಿ ಇಲಾಖೆಗೆ ಮಾಡಿದ ಅಪಚಾರ. ಅವರ ಹೇಳಿಕೆಗೆ ಪ್ರತಿಯಾಗಿ, ‘ಬಾರಪ್ಪ ನಿಮ್ಮಪ್ಪನಿಗೆ ಹುಟ್ಟಿದ್ದರೆ ಹೊಡಿ’ ಎಂದು ಹೇಳಬೇಕು ಅಂದುಕೊಂಡಿದ್ದೆ. ಆದರೆ, ತಂಗಡಗಿ ಮಟ್ಟಕ್ಕೆ ನಾವು ಇಳಿದು ಮಾತನಾಡಲು ಹೋಗಲ್ಲ. ಇಂಥವರನ್ನು ಸಂಪುಟದಲ್ಲಿ ಇಟ್ಟುಕೊಳ್ಳಬಾರದು ಎಂದು ಆಗ್ರಹಿಸಿದ್ದಾರೆ.
ಕೊಪ್ಪಳದ ಕಾರಟಗಿಯಲ್ಲಿ ಮಾತನಾಡಿದ್ದ ತಂಗಡಗಿ, ಮೋದಿ ಸರ್ಕಾರ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿತ್ತು. ಆದರೆ, ಮೋದಿ ಸರ್ಕಾರ ಭರವಸೆ ಈಡೇರಿಸಿಲ್ಲ. ‘ಮೋದಿ ಮೋದಿ’ ಎಂದು ಘೋಷಣೆ ಕೂಗುವ ಯುವಕರು, ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಬೇಕು ಎಂದು ಹೇಳಿಕೆ ನೀಡಿದ್ದರು.