ನವದೆಹಲಿ, ಮಾ 27(DaijiworldNews/ AK):ವಾಷಿಂಗ್ ಮಷಿನ್ನಲ್ಲಿ ಬಚ್ಚಿಟ್ಟಿದ್ದ 2.54 ಕೋಟಿ ರೂ. ನಗದುಗಳನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ವಿದೇಶಿ ವಿನಿಮಯ ಕಾನೂನು ಉಲ್ಲಂಘಿಸಿದ ಆರೋಪದಡಿಯಲ್ಲಿ ಕಳೆದ ಕೆಲವು ದಿನಗಳಿಂದ ದೆಹಲಿ, ಹೈದರಾಬಾದ್, ಮುಂಬೈ, ಕೋಲ್ಕತ್ತಾ ಮತ್ತು ಹರಿಯಾಣದ ಕುರುಕ್ಷೇತ್ರದ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ವಿವಿಧ ಕಂಪನಿಗಳ ಕಚೇರಿ ಮತ್ತು ಅವುಗಳ ನಿರ್ದೇಶಕರ ಮನೆಗಳ ಮೇಲೆ ಶೋಧ ನಡೆಸಲಾಯಿತು. ಕಂಪನಿಗಳ ಪಾಲುದಾರರಾದ ವಿಜಯ್ ಕುಮಾರ್ ಶುಕ್ಲಾ, ಸಂಜಯ್ ಗೋಸ್ವಾಮಿ, ಸಂದೀಪ್ ಗಾರ್ಗ್ ಮತ್ತು ವಿನೋದ್ ಕೇಡಿಯಾ ಸೇರಿದಂತೆ ಇತರರನ್ನೂ ಸಹ ತನಿಖೆಗೆ ಒಳಪಡಿಸಲಾಗಿದೆ.
ಸಿಂಗಾಪುರದ ಗ್ಯಾಲಕ್ಸಿ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್, ಹಾರಿಜಾನ್ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ಗೆ 1,800 ಕೋಟಿ ರೂ. ಮೊತ್ತದ ಸಂಶಯಾಸ್ಪದ ಬಾಹ್ಯ ಹಣ ರವಾನೆ ಮಾಡಲಾಗಿದೆ ಎಂದು ಕೆಲ ಕಂಪನಿಗಳ ಮೇಲೆ ಆರೋಪ ಕೇಳಿಬಂದಿತ್ತು. ಈ ಹಿನ್ನಲೆ ನಿಖರ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶೋಧದ ವೇಳೆ ವಾಷಿಂಗ್ ಮಷಿನ್ನಲ್ಲಿ ಬಚ್ಚಿಟ್ಟಿದ್ದ 2.54 ಕೋಟಿ ರೂ. ಮೌಲ್ಯದ ಅಪರಿಚಿತ ನಗದು ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ. ಈ ವೇಳೆ ದಾಳಿಯ ಸಮಯದಲ್ಲಿ ಆರೋಪಿಗಳ ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.