ಕೊಡಗು, ಮೇ 1 (Daijiworld News/MSP): ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಮತ್ತು ಮಗಳನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದಿರುವ ಭೀಕರ ಘಟನೆ ಕೊಡಗು ಜಿಲ್ಲೆಯ ದೊಡ್ಡಮಲ್ತೆ ಗ್ರಾಮದಲ್ಲಿ ಏ.30 ರಂದು ನಡೆದಿದೆ. 45 ವರ್ಷದ ಕವಿತಾ ಹಾಗೂ 17 ವರ್ಷದ ಜಗಶ್ರೀ ಕೊಲೆಯಾದ ದುರ್ದೈವಿಗಳಾಗಿದ್ದಾರೆ.
ದುಷ್ಕರ್ಮಿಗಳು ಕವಿತಾ ಅವರ ತಲೆ, ಕುತ್ತಿಗೆ, ಕೈ, ಕಾಲು ಹಾಗೂ ಜಗಶ್ರೀ ಅವರ ಕೈ ಹಾಗೂ ತಲೆಭಾಗಕ್ಕೆ ಕಡಿದು ಹಲ್ಲೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡ ಅವರು ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 8 ನೇ ತರಗತಿಯಲ್ಲಿ ಓದುತ್ತಿರುವ ಪುತ್ರ ಮೇಘಮದನ್ರಾಜ್, ತನ್ನ ತಾಯಿ ಕವಿತಾ ಅವರ ಮೊಬೈಲ್ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಆಫ್ ಆಗಿದ್ದರಿಂದ ಆತಂಕಗೊಂಡು ತೋಟದ ಬಳಿ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.
ಗಾಬರಿಗೊಂಡ ಬಾಲಕ ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಸೋಮವಾರಪೇಟೆ ಡಿವೈಎಸ್ಪಿ ದಿನಕರ್ ಶೆಟ್ಟಿ, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಸಂಜೆ ವೇಳೆಗೆ ಜಿಲ್ಲಾ ಎಸ್ಪಿ ಸುಮನ್ ಡಿ.ಪಣ್ಣೇಕರ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಇನ್ನೊಂದೆಡೆ ಶ್ವಾನದಳವಿದ್ದರೂ ಯಾವುದೇ ರೀತಿಯಲ್ಲಿ ಸ್ಥಳ ಪರಿಶೀಲನೆ ಮಾಡದೆ ಮೃತದೇಹಗಳನ್ನು ಸ್ಥಳಾಂತರಿಸಲು ಪೊಲೀಸರು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ಆ ಬಳಿಕ ಡಿವೈಎಸ್ಪಿ ದಿನಕರ್ ಶೆಟ್ಟಿ ಸಮಾಧಾನಿಸಿ ಶ್ವಾನದಳದಿಂಡ ಪರಿಶೀಲನೆ ನಡೆಸಿ ಮೃತದೇಹವನ್ನು ಸಾಗಿಸಿದರು.
ಘಟನೆಗೆ ಜಮೀನಿನಲ್ಲಿನ ದಾರಿ ವಿವಾದವೇ ಕಾರಣ ಎಂದು ಶಂಕಿಸಲಾಗಿದ್ದು, ಈ ಹಿಂದೆ ದಾರಿಗೆ ಸಂಬಂಧಿಸಿದಂತೆ ತಕರಾರು ನಡೆಸುತ್ತಿದ್ದ ಸ್ಥಳೀಯ ಮೂವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿರುವ ಬಗ್ಗೆ ತಿಳಿದುಬಂದಿದೆ.
ತಂದೆಯನ್ನು ಈ ಹಿಂದೆಯೇ ಕಳೆದುಕೊಂಡಿದ್ದ ಮೃತ ಜಗಶ್ರೀ ಹಾಸನದ ಸಂತ ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ರಜೆಯ ಹಿನ್ನೆಲೆ ಮನೆಗೆ ಬಂದಿದ್ದಳು. ಪುತ್ರ ಮೇಘಮದನ್ರಾಜ್ ವೀರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ರಜೆ ಹಿನ್ನೆಲೆಯಲ್ಲಿ ಮನೆಗೆ ಆಗಮಿಸಿದ್ದ. ಈಗ ಹೆತ್ತವರನ್ನು ಕಳೆದುಕೊಂಡು ತಬ್ಬಲಿಯಾಗಿದ್ದಾನೆ. ಸೋಮವಾರಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.