ನವದೆಹಲಿ, ಮೇ01(Daijiworld News/SS): ವಾರಣಾಸಿಯಿಂದ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಬಿಎಸ್ಎಫ್ ಸೈನಿಕ ತೇಜ್ಬಹದ್ದೂರ್ ಅವರಿಗೆ ಚುನಾವಣಾ ಆಯೋಗ ನೊಟೀಸ್ ನೀಡಿದೆ.
ನರೇಂದ್ರ ಮೋದಿ ವಿರುದ್ಧ ತೇಜ್ಬಹದ್ದೂರ್ ಸಲ್ಲಿಸಿರುವ ನಾಮಪತ್ರದಲ್ಲಿ ಕೆಲ ವಿಷಯಗಳನ್ನು ಮುಚ್ಚಿಡಲಾಗಿದೆ ಎಂದು ಆಯೋಗವು ಅಭಿಪ್ರಾಯಪಟ್ಟಿದ್ದು, ಈ ಕುರಿತು ಉತ್ತರ ನೀಡುವಂತೆ ತೇಜ್ ಬಹದ್ದೂರ್ ಅವರನ್ನು ಕೋರಿದೆ.
ಬಿಎಸ್ಎಫ್ ಸೇವೆಯಿಂದ ತೇಜ್ ಬಹದ್ದೂರ್ ಅವರು ವಜಾಗೊಂಡಿದ್ದಾರೆ. ಭ್ರಷ್ಟಾಚಾರ ಅಥವಾ ವಿಶ್ವಾಸದ್ರೋಹದಡಿ ಸೇವೆಯಿಂದ ವಜಾಗೊಂಡ ವ್ಯಕ್ತಿ ಐದು ವರ್ಷ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಹಾಗಾಗಿ ಸೇವೆಯಿಂದ ವಜಾಗೊಂಡಿರುವ ತೇಜ್ಬಹದ್ದೂರ್ ಬಿಎಸ್ಎಫ್ನಿಂದ ನಿರಪೇಕ್ಷಣಾ ಪತ್ರ ತರುವಂತೆ ಆಯೋಗ ಸೂಚಿಸಿದೆ.
ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದ ತೇಜ್ಬಹದ್ದೂರ್ ಅವರು, ಬಿಎಸ್ಎಫ್ನಿಂದ ವಜಾ ಆಗಿರುವ ಬಗ್ಗೆ ನಾಮಪತ್ರದಲ್ಲಿ ಉಲ್ಲೇಖಿಸಿದ್ದರು. ಆದರೆ ಬಿಎಸ್ಎಸ್ಪಿ ಅಭ್ಯರ್ಥಿಯಾಗಿ ಸಲ್ಲಿಸಿದ ನಾಮಪತ್ರದಲ್ಲಿ ಈ ಮಾಹಿತಿ ಇಲ್ಲ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಮಾಜಿ ಬಿಎಸ್ಎಫ್ ಸೈನಿಕ ತೇಜ್ಬಹದ್ದೂರ್ ಅವರಿಗೆ ಚುನಾವಣಾ ಆಯೋಗ ನೊಟೀಸ್ ನೀಡಿದೆ.