ಮೈಸೂರು, ಮಾ 28(DaijiworldNews/ AK): ನನ್ನ ಸೋಲಿನ ಬಗ್ಗೆ ಹೇಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದರು ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಮಗನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ ಎಂದು ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ. ಮಗನ ಸೋಲಿಗೆ ಈ ಮಹಾನುಭಾವರು ಎಷ್ಟು ಕಾರಣ ಎಂಬುದು ಗೊತ್ತಿದೆ. ಅದರ ಆಧಾರದ ಮೇಲೆ ಈಗ ಮಾತನಾಡುತ್ತಿದ್ದಾರೆ. ಎಲ್ಲದಕ್ಕೂ ಜನರು ಉತ್ತರ ಕೊಡುತ್ತಾರೆ ಎಂದರು.
ನನ್ನನ್ನು ವಲಸಿಗ ಎಂದು ಹೇಳಿದ್ದಾರೆ. ಆದರೆ, ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಯಾರು? ಅವರು ವಲಸಿಗರು ಅಲ್ವಾ.ಮೂಲ ಕಾಂಗ್ರೆಸ್ಸಿಗರನ್ನು ಕಸದಬುಟ್ಟಿಗೆ ಹಾಕಿ ಅಧಿಕಾರ ಮಾಡುತ್ತಿಲ್ಲವಾ ಎಂದರು.
ನಾನು ಕನ್ನಡಿಗ ಎಲ್ಲಿ ಬೇಕಾದರೂ ನಾನು ಸ್ಪರ್ಧೆ ಮಾಡಬಹುದು. ಈ ಬಾರಿ ಮಂಡ್ಯದಲ್ಲಿ ಹಳೆಯ ಸ್ನೇಹಿತರ ಜೊತೆ ಸ್ಪರ್ಧೆ ಎದುರಿಸಬೇಕು. ಸ್ನೇಹಿತರ ಎದುರು ಸ್ಪರ್ಧೆಗಿಳಿಯುತ್ತಿರುವುದು ನನ್ನ ಹಣೆಬರಹ ಎಂದು ಹೇಳಿದರು.