ಬೆಳಗಾವಿ, ಮಾ 28(DaijiworldNews/AA): ಬೆಳಗಾವಿ ಜಿಲ್ಲೆಯ ಜನರನ್ನ ಬಕ್ರಾ ಮಾಡಲು ಜಗದೀಶ್ ಶೆಟ್ಟರ್ ಬಂದಿದ್ದಾರಾ. ಜಿಲ್ಲೆಗೆ ಅವರ ಕೊಡುಗೆ ಏನು? ನಾಚಿಕೆ ಆಗಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡದ ಜನ ಹೊರ ಹಾಕಿದ್ದಾರೆ. ಹೊರಗೆ ಹಾಕಿಸಿಕೊಂಡು ಇಲ್ಲಿ ಬಂದು ಮಾತನಾಡುತ್ತಿದ್ದಾರೆ. ಇದು ನನ್ನ ಕರ್ಮ ಭೂಮಿ ಅಂದ್ರೆ ಸುಮ್ಮನಿರಬೇಕಾ? ಹುಬ್ಬಳ್ಳಿಗೆ ನನ್ನ ಕರ್ಮಭೂಮಿ ಅಂದ್ರೆ ಆ ಜನ ಒಪ್ತಾರಾ? ನಾವೇನು ಹುಚ್ಚರಿದ್ದೇವಾ ಎಂದು ಶೆಟ್ಟರ್ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿ ಪಕ್ಷದಿಂದ ಶೆಟ್ಟರ್ ಆರು ಬಾರಿ ಆರಿಸಿ ಬಂದಿದ್ದಾರೆ. ಶೆಟ್ಟರ್ ಸಿಎಂ, ಮಂತ್ರಿಯಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಜಿಲ್ಲೆ ಹಾಗೂ ಕಾರ್ಯಕರ್ತರ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ. ಅವರ ಕಾರ್ಯಕರ್ತರೇ ಗೋಬ್ಯಾಕ್ ಎಂದು ಘೋಷಣೆ ಕೂಗುತ್ತಿದ್ದಾರೆ. ಸಂಸದರು ಯಾರು, ಅವರ ಜವಾಬ್ದಾರಿ ಏನು ಜನ ತೀರ್ಮಾನ ಮಾಡುತ್ತಿದ್ದಾರೆ. ನಾನು ಒಂದೇ ವರ್ಷದಲ್ಲಿ ಒಂದು ಸಾವಿರ ಕೋಟಿ ಅನುದಾನ ತಂದು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಸಂಸತ್ತಿನಲ್ಲಿ ಜನರ ಧ್ವನಿಯಾಗಿ ಮಾತನಾಡುವ ನಾಯಕ ಬೇಕು ಎಂದು ತಿಳಿಸಿದ್ದಾರೆ.