ಬೆಂಗಳೂರು, ಮೇ 1 (Daijiworld News/MSP): ಶಿಕ್ಷಣ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ತರಲು, ರಾಜ್ಯದಲ್ಲಿ ಎಂಟನೇ ತರಗತಿವರೆಗೆ ಮಕ್ಕಳನ್ನು ಅನುತ್ತೀರ್ಣಗೊಳಿಸಬಹುದಾದ ನೀತಿ ನೋ ಡಿಟೆನ್ಶನ್ ಪಾಲಿಸಿಯನ್ನು ಜಾರಿಗೆ ತರುವ ಬಗ್ಗೆ ಅಧಿಕಾರಿಗಳು ಗಂಭೀರ ಚಿಂತನೆ ನಡೆಸುತ್ತಿದ್ದಾರೆ.
’ಶಿಕ್ಷಣ ವ್ಯವಸ್ಥೆಯ ಸುಧಾರಣೆಯ ಜತೆಗೆ ಶಾಲಾ ಪ್ರಾಥಮಿಕ ಹಂತದಲ್ಲೇ ಸ್ಕ್ರೀನಿಂಗ್ ಮಾಡಲು ನೋ ಡಿಟೆನ್ಶನ್ ಪಾಲಿಸಿ ಸಹಾಯಕವಾಗುತ್ತದೆ ” ಎಂಬುವುದು ಶಿಕ್ಷಣ ಇಲಾಖೆಯ ಚಿಂತನೆಯಾಗಿದೆ. 2009ರ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ ಕೇಂದ್ರ ಸಚಿವ ಸಂಪುಟ ತಿದ್ದುಪಡಿ ತಂದು ನೋ ಡಿಟೆಶ್ನನ್ ಪಾಲಿಸಿ ರೂಪಿಸಿತ್ತು. ಅಲ್ಲದೆ ಇದರ ಅನುಷ್ಟಾನವನ್ನು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿತ್ತು. ಮಾತ್ರವಲ್ಲದೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಶಾಲಾ ಮಕ್ಕಳನ್ನು ಅನುತೀರ್ಣಗೊಳಿಸುವಂತಿಲ್ಲ. ರಾಜ್ಯ ಸರ್ಕಾರ ಒಂದೊಮ್ಮೆ ಈ ನೀತಿಯ ಅನುಷ್ಟಾನಗೊಳಿಸಿದರೆ 5 ಮತ್ತು 8 ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಬೇಕು ಎಂದು ತಿಳಿಸಿತ್ತು.
ಆದರೆ ಡಿಟೆನ್ಶನ್ ಪಾಲಿಸಿ ಬಳಿಕ ಹಲವು ರಾಜ್ಯಗಳಲ್ಲಿ ಶೈಕ್ಷಣಿಕ ವ್ಯವಸ್ಥೆ ಸಾಕಷ್ಟು ಕುಸಿತ ಕಂಡುಬಂದಿತ್ತು. ಮಾತ್ರವಲ್ಲದೆ ಎಲ್ಲರನ್ನು ಉತ್ತೀರ್ಣಗೊಳಿಸಿಲಾಗುತ್ತದೆ. ಹೀಗಾಗಿ ಮಕ್ಕಳಿಗೂ ಓದಿನ ಮೇಲಿನ ಆಸಕ್ತಿ ಕಡಿಮೆಯಾಗುತ್ತಿರುವುದನ್ನು ಸರಕಾರ ಗಮನಿಸಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದು ಸಚಿವ ಸಂಪುಟದಲ್ಲಿ ಅನುಮತಿ ಪಡೆದಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪ್ರಧಾನ ಕಾರ್ಯದರ್ಶಿ ಎಸ್.ಆರ್ ಉಮಾಶಂಕರ್ ನೋ ಡಿಟೆನ್ಶನ್ ಪಾಲಿಸಿಯ ಅನುಷ್ಟಾನ ಸಂಬಂಧ ಇಲಾಖೆಯ ಮಟ್ಟದಲ್ಲಿ ಚರ್ಚೆ ನಡೆಸಿದೆ. ಸರ್ಕಾರದೊಂದಿಗೂ ಈ ವಿಷಯವಾಗಿ ಚರ್ಚೆ ನಡೆಸಲಿದ್ದೇವೆ. ಸರ್ಕಾರದಿಂದ ಅನುಮತಿ ದೊರೆತರೆ 2019-20 ನೇ ಸಾಲಿನಿಂದ ಅನುಷ್ಟಾನಕ್ಕೆ ತರಲಿದ್ದೇವೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ಅನುಷ್ಟಾನ ಮಾಡಲಿದ್ದೇವೆ ಎಂದಿದ್ದಾರೆ.