ದೆಹಲಿ, ಮಾ 28(DaijiworldNews/AA): ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನದ ಕುರಿತು ಅಮೇರಿಕ ನೀಡಿರುವ ಹೇಳಿಕೆಗಳು ಅನಗತ್ಯವಾಗಿದ್ದು, ತೀವ್ರ ಪ್ರತಿಭಟನೆಯನ್ನು ದಾಖಲಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಂದು ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿದೇಶಾಂಗ ಸಚಿವಾಲಯ, ಅಮೇರಿಕದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಭಾರತವು ಅಲ್ಲಿನ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಗೆ ತನ್ನ ತೀವ್ರ ಆಕ್ಷೇಪಣೆ ಮತ್ತು ಪ್ರತಿಭಟನೆಯನ್ನು ಸಲ್ಲಿಸಿತ್ತು. ಇತ್ತೀಚಿನ ಹೇಳಿಕೆಗಳು ಅನಗತ್ಯವಾಗಿದ್ದು, ಭಾರತದಲ್ಲಿ, ಕಾನೂನು ಪ್ರಕ್ರಿಯೆಗಳು ಕಾನೂನಿನ ನಿಯಮದಿಂದ ನಡೆಸಲ್ಪಡುತ್ತವೆ. ಇದೇ ರೀತಿಯ ನೀತಿಯನ್ನು ಹೊಂದಿರುವ ಯಾರಾದರೂ ವಿಶೇಷವಾಗಿ ಸಹವರ್ತಿ ಪ್ರಜಾಪ್ರಭುತ್ವಗಳು ಈ ಸತ್ಯವನ್ನು ಶ್ಲಾಘಿಸಲು ಹಿಂಜರಿಯಬಾರದು ಎಂದು ಹೇಳಿದೆ.
ಕೇಜ್ರಿವಾಲ್ ಅವರ ಬಂಧನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಮೇರಿಕ "ನ್ಯಾಯಯುತ, ಪಾರದರ್ಶಕ ಮತ್ತು ಸಮಯೋಚಿತ ಕಾನೂನು ಪ್ರಕ್ರಿಯೆ ಕೈಗೊಳ್ಳಬೇಕು" ಎಂದು ಹೇಳಿತ್ತು. ಇದೀಗ ಅಮೇರಿಕ ಹೇಳಿಕೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀವ್ರವಾಗಿ ಪ್ರತಿಕ್ರಿಯೆ ನೀಡಿದೆ.