ಒಡಿಸ್ಸಾ,ಮೇ 1 (Daijiworld News/MSP): ಮೇ 3 ಶುಕ್ರವಾರಂದು ಫನಿ ಚಂಡಮಾರುತ ಒಡಿಸ್ಸಾ ಕಡಲ ತೀರಕ್ಕೆ ಅಪ್ಪಳಿಸಲಿದ್ದು, ಚಂಡಮಾರುತವನ್ನು ಎದುರಿಸಲು ಒಡಿಸ್ಸಾ ಸಕಲ ವ್ಯವಸ್ಥೆಗಳನ್ನೂ ಮಾಡಿಕೊಂಡಿದೆ. ಒಡಿಸ್ಸಾದಲ್ಲಿ ಎನ್ ಡಿಆರ್ ಎಫ್ ಪಡೆಗಳು ಸರ್ವ ಸನ್ನದ್ಧ ಸ್ಥಿತಿಯಲ್ಲಿವೆ. ಈಗಾಗಲೇ ಒಡಿಸ್ಸಾ ಮತ್ತು ಆಂಧ್ರ ಪ್ರದೇಶ ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಪರಿಣಾಮ ಒಡಿಶಾದಲ್ಲಿ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ.
ಇನ್ನೊಂದೆಡೆ ಫನಿ ಚಂಡಮಾರುತ ತನ್ನ ರುದ್ರನರ್ತನ ತೋರಿಸಲಿದೆ ಎಂಬ ಭಾರತೀಯ ಹವಾಮಾನ ಇಲಾಖೆ ವರದಿ ಆಧಾರಿಸಿ ಒಡಿಸ್ಸಾದಲ್ಲಿ ಚುನಾವಣಾ ಆಯೋಗ ಬುಧವಾರದಿಂದ ,ಫನಿ ಚಂಡಮಾರುತದಿಂದ ಅಪ್ಪಳಿಸಲಿರುವ ಒಡಿಸ್ಸಾದ 11 ಜಿಲ್ಲೆಗಳಲ್ಲಿ ಮಾದರಿ ನೀತಿ ಸಂಹಿತೆಯನ್ನು ತೆರವುಗೊಳಿಸಿದೆ. ಫನಿ ಚಂಡಮಾರುತದಿಂದ ತೊಂದರೆಗೊಳಗಾದರೆ ರಕ್ಷಣಾ ಕಾರ್ಯ, ಪರಿಹಾರ, ಪುನರ್ ಸ್ಥಾಪನೆ ಚಟುವಟಿಕೆಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಅದಕ್ಕೆ ಚುನಾವಣಾ ನೀತಿ ಸಂಹಿತೆಯಿಂದ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಆಯೋಗ ಈ ಕ್ರಮ ತೆಗೆದುಕೊಂಡಿದೆ.
ಒಡಿಸ್ಸಾದ ಪುರಿ, ಜಗತ್ಸಿಂಗ್ಪುರ, ಕೇಂದ್ರಪಾರಾ,ಭದ್ರಕ್, ಬಾಲಸೋರ್, ಮಯೂರ್ ಭಂಜ್, ಗಜಪತಿ, ಗಂಜಾಮ್, ಖೋರ್ಧಾ, ಕಟಕ್ ಮತ್ತು ಜಾಜ್ಪುರ ಜಿಲ್ಲೆಗಳಿಂದ ಮಾದರಿ ನೀತಿ ಸಂಹಿತೆ ತೆರವುಗೊಳಿಸಿದೆ. ಪ್ರಸ್ತುತ ಗಂಟೆಗೆ 200 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಫನಿ ಒಡಿಶಾದತ್ತ ಧಾವಿಸುತ್ತಿದೆ. ಒಡಿಶಾದಲ್ಲಿ ಈಗಾಗಲೇ ಭಾರಿ ಮಳೆಯಾಗುತ್ತಿದ್ದು, ಬೌಧ್, ಕಲಾಹಂಡಿ, ಸಂಬಾಲ್ಪುರ, ಡಿಯೋಘಡ್ ಮತ್ತು ಸುಂದರ್ ಘಡ್ ನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಇಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.