ಹರಿಯಾಣ, ಮಾ 30 (DaijiworldNews/AK): ದೇಶದ ಪ್ರತಿಯೊಂದು ಕುಟುಂಬಗಳಲ್ಲಿ ಒಬ್ಬರಿಗಾದರೂ ಸರ್ಕಾರಿ ಕೆಲಸ ಸಿಕ್ಕರೂ ಸಾಕು ಅಂತಾರೆ. ಹೀಗಿರುವಾಗ ಕೇಂದ್ರ ಸಚಿವಾಲಯದ ಕೆಲಸವನ್ನು ತೊರೆದು ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಿದ ಕನಿಕಾ ರಾಠಿ ಯಶಸ್ಸಿನ ಕಥೆ ಇಲ್ಲಿದೆ.
ಹರಿಯಾಣದ ಬಹದ್ದೂರ್ ಗಢ ನಿವಾಸಿಯಾಗಿರುವ ಕನಿಕಾ ರಾಠಿ ಯುಪಿಎಸ್ಸಿ ಪರೀಕ್ಷೆಯಲ್ಲಿ 64ನೇ ರ್ಯಾಂಕ್ ಗಳಿಸಿದ್ದಾರೆ. ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಲು ಇವರು ಸರ್ಕಾರಿ ಕೆಲಸವನ್ನೂ ತೊರೆದರು.ಬಳಿಕ ಕನಿಕಾ ರಾಠಿ ಐಎಎಸ್ ಆಗಲು ಸತತ 6 ವರ್ಷಗಳ ಕಾಲ ಶ್ರಮಿಸಿ 2022 ರಲ್ಲಿ ಅದರ ಫಲ ಸಿಗ್ತು.
ಐಎಎಸ್ ಕನಿಕಾ ರಾಠಿ ಅವರ ತಂದೆ ನರೇಶ್ ಎಂಜಿನಿಯರ್, ತಾಯಿ ನೀಲಂ ತ್ರಿಪಾಠಿ ಶಿಕ್ಷಕಿ. ಕನಿಕಾ ರಾಠಿ ಶಾಲಾ ದಿನಗಳಿಂದಲೂ ತುಂಬಾ ಬುದ್ದಿವಂತರು. ಬಹದ್ದೂರ್ ಗಢ್ನ ಬಾಲ ಭಾರತಿ ಶಾಲೆಯಲ್ಲಿ 12 ನೇ ತರಗತಿಯಲ್ಲಿ ಉತ್ತೀರ್ಣರಾದರು. ಬಳಿಕ ದೆಹಲಿಯ ಕಿರೋರಿ ಮಾಲ್ ಕಾಲೇಜಿನಿಂದ ಗಣಿತದಲ್ಲಿ ಬಿಎಸ್ಸಿ ಪದವಿ ಪಡೆದರು.
ಐಎಎಸ್ ಕನಿಕಾ ರಾಠಿ ಅವರು 2015ರಲ್ಲಿ ದೆಹಲಿಯ ಕರೋಲ್ ಬಾಗ್ ನಲ್ಲಿರುವ ಕೋಚಿಂಗ್ ಸೆಂಟರ್ ನಿಂದ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. 2016 ಮತ್ತು 2017ರಲ್ಲಿ ಅನುತ್ತೀರ್ಣರಾದರು. 2019 ರಲ್ಲಿ, ಕನಿಕಾ ರಥಿ ಅವರು ಗೃಹ ಸಚಿವಾಲಯದಲ್ಲಿ ಕೆಲಸ ಪಡೆದರು. ಸ್ವಲ್ಪ ಸಮಯದ ವರೆಗೆ ಪಾಟ್ನಾದ ಐಬಿ ಇಲಾಖೆಯಲ್ಲಿ ಸರ್ಕಾರಿ ನೌಕರಿ ಮಾಡಿದ ಬಳಿಕ ಪೋಷಕರ ಒಪ್ಪಿಗೆ ಮೇರೆಗೆ ರಾಜೀನಾಮೆ ನೀಡಿದರು.
30 ಏಪ್ರಿಲ್ 2022 ರಂದು UPSC ಸಂದರ್ಶನವನ್ನು ನೀಡಿದರು. ಅದರ ಫಲಿತಾಂಶವು 30 ಮೇ 2022 ರಂದು ಬಂದಿತು. ಕೊನೆಗೆ ನಾಲ್ಕನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಎಎಸ್ ಆದರು.
ಐಎಎಸ್ ಕನಿಕಾ ರಾಠಿ ಪ್ರತಿದಿನ 5-6 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಒಂದು ವರ್ಷದವರೆಗೆ ತರಬೇತಿಯ ಸಹಾಯವನ್ನು ಪಡೆದರು, ಆದರೆ ನಂತರ ಅವರು ಸ್ವಯಂ ಅಧ್ಯಯನಕ್ಕೆ ಆದ್ಯತೆ ನೀಡಿದರು .