ನವದೆಹಲಿ, ಮಾ 30(DaijiworldNews/AA): 'ಮಾತನಾಡಲು ಬಾರದ ಇವರು ಅಡುಗೆ ಮಾಡೋದಕ್ಕೆ ಲಾಯಕ್ಕು' ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಪತ್ನಿ ದಾವಣಗೆರೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ವಿರುದ್ಧ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಖಂಡಿಸಿರುವ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಶಾಮನೂರು ಅವರ ಹೇಳಿಕೆಗೆ ಗರಂ ಆಗಿದ್ದಾರೆ.
ದಾವಣಗೆರೆಯಿಂದ ಗೆದ್ದು ಮೋದಿಗೆ ಕಮಲ ಅರ್ಪಿಸುತ್ತೇನೆ ಅಂತಾರೆ. ಮೊದಲು ಜಿಲ್ಲೆಯ ಸಮಸ್ಯೆ ಬಗ್ಗೆ ತಿಳಿಯಲಿ ಎಂದೆಲ್ಲಾ ಗಾಯತ್ರಿ ಅವರನ್ನು ಶಾಮನೂರು ಅವರು ಟೀಕೆ ಮಾಡಿದ್ದರು. ಇದಕ್ಕೆ ಸೈನಾ ನೆಹ್ವಾಲ್ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.
ಮಹಿಳೆಯನ್ನು ಅಡುಗೆ ಕೋಣೆಗೆ ಸೀಮಿತಗೊಳಿಸಬೇಕು ಅಂತಾ ಕರ್ನಾಟಕ ಕಾಂಗ್ರೆಸ್ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ಹೇಳಿದ್ದಾರೆ. ಆದ್ರೆ ಪ್ರತಿ ಮಹಿಳೆಯೂ ಹೋರಾಡುತ್ತಾಳೆ ಅನ್ನೋ ತತ್ವದಲ್ಲಿ ನಂಬಿಕೆಯಿಟ್ಟುರುವ ಪಕ್ಷದ ಅಭ್ಯರ್ಥಿಯಾಗಿ ಗಾಯತ್ರಿ ಅವರು ಕಣದಲ್ಲಿದ್ದಾರೆ
ನಾನು ಭಾರತಕ್ಕಾಗಿ ಪದಕಗಳನ್ನು ಗೆದ್ದಾಗ ಏನು ಮಾಡಬೇಕೆಂದು ಕಾಂಗ್ರೆಸ್ ಪಕ್ಷ ಆದ್ಯತೆ ನೀಡುತ್ತಿತ್ತು? ಎಲ್ಲಾ ಹುಡುಗಿಯರು ಮತ್ತು ಮಹಿಳೆಯರು ತಮಗೆ ಇಷ್ಟವಾದ ಯಾವುದೇ ಕ್ಷೇತ್ರದಲ್ಲಿ ಸಾಧಿಸಬೇಕೆಂದು ಕನಸು ಕಾಣುತ್ತಿರುತ್ತಾರೆ. ಹೀಗಿರುವಾಗ ಹಾಗೆ ಏಕೆ ಹೇಳಬೇಕು? ಒಂದೆಡೆ ನಾವು ನಾರಿ ಶಕ್ತಿಗೆ ವಂದಿಸುತ್ತಿದ್ದೇವೆ. ನಮ್ಮ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಇನ್ನೊಂದೆಡೆ, ನಾರಿ ಶಕ್ತಿಯನ್ನು ಅಪಮಾನಗೊಳಿಸುವ ಮತ್ತು ಸ್ತ್ರೀ ದ್ವೇಷದ ಜನ ಇರುವುದು ನಿಜಕ್ಕೂ ಅಸಮಾಧಾನ ಎಂದು ತಮ್ಮ ಬರೆದುಕೊಳ್ಳುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.