ಕೇರಳ, ಮಾ 31(DaijiworldNews/AA): ಹೊಟೇಲ್ ನಲ್ಲಿ ಕ್ಲೀನರ್ ಹಾಗೂ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದವರು ಛಲ ಬಿಡದೇ ಉತ್ತಮವಾಗಿ ವ್ಯಾಸಂಗ ಮಾಡಿ ಐಎಎಸ್ ಅಧಿಕಾರಿಯಾದ ಬಿ. ಅಬ್ದುಲ್ ನಾಸಾರ್ ಅವರ ಯಶೋಗಾಥೆ ಇದು.
ಮೂಲತಃ ಕೇರಳದವರಾದ ಅಬ್ದುಲ್ ನಾಸಾರ್ ಅವರು ತಮ್ಮ 5ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಳ್ಳುತ್ತಾರೆ. ತಂದೆಯನ್ನು ಕಳೆದುಕೊಂಡ ಅವರ ಕುಟುಂಬ ಬಹಳ ಕಷ್ಟದ ಜೀವನ ಎದುರಿಸಬೇಕಾಗುತ್ತದೆ. ನಾಸಾರ್ ಅವರ ತಾಯಿ ಜೀವನೋಪಾಯಕ್ಕಾಗಿ ಮನೆ ಕೆಲಸಕ್ಕೆ ತೆರಳುತ್ತಿದ್ದರು. ಹೀಗಾಗಿ ಅಬ್ದುಲ್ ಹಾಗೂ ಅವರ ಒಡಹುಟ್ಟಿದವರನ್ನು ಅನಾಥಾಶ್ರಮಕ್ಕೆ ಸೇರಿಸಲಾಯಿತು.
ನಾಸಾರ್ ಅವರು ತಮ್ಮ 13 ವರ್ಷಗಳನ್ನು ಅನಾಥಾಶ್ರಮದಲ್ಲೇ ಕಳೆಯುತ್ತಾರೆ. ಈ ವೇಳೆ ತನ್ನ ಶಾಲಾ ಶಿಕ್ಷಣವನ್ನು ಅವರು ಮುಗಿಸಿದರು. ನಾಸಾರ್ ಅವರು 10ನೇ ವಯಸ್ಸಿನಲ್ಲಿ ಹೋಟೆಲ್ ಕ್ಲೀನರ್ ಮತ್ತು ಸಪ್ಲೇಯರ್ ಆಗಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಈ ಮಧ್ಯೆ ಅವರು ಒಮ್ಮೆ ಅನಾಥಾಶ್ರಮದಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದರು. ಆದರೆ ತನ್ನ ಶಿಕ್ಷಣ ಪೂರ್ಣಗೊಳಿಸಲೆಂದು ಅನಾಥಾಶ್ರಮಕ್ಕೆ ಮರಳಿದ್ದರು.
ತಮ್ಮ ಕಡು ಬಡತನದ ನಡುವೆಯೂ ನಾಸಾರ್ ಅವರು ಪಿಯುಸಿ ಮುಗಿಸಿದರು. ಬಳಿಕ ತಲಶ್ಶೇರಿಯ ಸರ್ಕಾರಿ ಕಾಲೇಜಿನಲ್ಲಿ ಪದವಿ ಪಡೆಯುತ್ತಾರೆ. ಈ ಸಮಯದಲ್ಲಿ ಅವರು ಪತ್ರಿಕೆ ವಿತರಣೆ, ಟ್ಯೂಷನ್ ತರಗತಿಗಳನ್ನು ತೆಗೆದುಕೊಳ್ಳುವುದು ಮತ್ತು ಫೋನ್ ಆಪರೇಟರ್ನಂತಹ ವಿವಿಧ ಉದ್ಯೋಗಗಳನ್ನು ಮಾಡುತ್ತಾ ತಮ್ಮ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದರು.
1994 ರಲ್ಲಿ, ನಾಸರ್ ತಮ್ಮ ಸ್ನಾತಕೋತ್ತರ ಪದವಿ ಪಡೆದ ಬಳಿಕ ಕೇರಳ ಆರೋಗ್ಯ ಇಲಾಖೆಯ ಅಧಿಕಾರಿಯಾಗಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ನಂತರ 2006 ರಲ್ಲಿ ರಾಜ್ಯ ಸಿವಿಲ್ ಸೇವೆಯಲ್ಲಿ ಡೆಪ್ಯುಟಿ ಕಲೆಕ್ಟರ್ ಹುದ್ದೆಗೆ ಏರುತ್ತಾರೆ. ನಾಸರ್ ಅವರು 2015 ರಲ್ಲಿ ಕೇರಳದ ಅತ್ಯುತ್ತಮ ಡೆಪ್ಯುಟಿ ಕಲೆಕ್ಟರ್ ಎಂದು ಗುರುತಿಸಲ್ಪಡುತ್ತಾರೆ.
ನಾಸಾರ್ ಅವರು 2017ರಲ್ಲಿ ಐಎಎಸ್ ಅಧಿಕಾರಿಯಾಗಿ ಬಡ್ತಿ ಪಡೆಯುತ್ತಾರೆ. 2019 ರಲ್ಲಿ ಕೊಲ್ಲಂನ ಜಿಲ್ಲಾಧಿಕಾರಿಯಾಗಿ ನೇಮಕಗೊಳ್ಳುತ್ತಾರೆ. ಇದಕ್ಕೂ ಮೊದಲು ಕೇರಳ ಸರ್ಕಾರದ ವಸತಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.