ಬೆಂಗಳೂರು, ಮೇ01(Daijiworld News/SS): ಕೇಂದ್ರದ ಮಾಜಿ ಸಚಿವ, ಹಿರಿಯ ಮುತ್ಸದ್ಧಿ ಎಸ್.ಎಂ.ಕೃಷ್ಣ 87ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಅವರ ನಿವಾಸಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್, ಶಾಸಕ ಅರವಿಂದ್ ಲಿಂಬಾವಳಿ, ನಗರ ಬಿಜೆಪಿ ಘಟಕದ ಅಧ್ಯಕ್ಷ ಸದಾಶಿವ, ಪಕ್ಷದ ಸಹವಕ್ತಾರ ಎ.ಎಚ್.ಆನಂದ್ ಸೇರಿದಂತೆ ಮತ್ತಿತರ ಮುಖಂಡರು ಆಗಮಿಸಿ ಕೃಷ್ಣ ಅವರಿಗೆ ಹೂಗುಚ್ಛ ನೀಡಿ ಹುಟ್ಟುಹಬ್ಬದ ಪ್ರಯುಕ್ತ ಶುಭಾಷಯಗಳನ್ನು ಕೋರಿದ್ದಾರೆ.
ಕೇವಲ ಬಿಜೆಪಿ ಮಾತ್ರವಲ್ಲದೆ ಬೆಳಗಿನಿಂದಲೇ ಎಸ್.ಎಂ.ಕೃಷ್ಣ ಅವರ ಮನೆಗೆ ಡಿ.ಕೆ.ಶಿವಕುಮಾರ್ ಸೇರಿದಂತೆ ವಿವಿಧ ವಿಪಕ್ಷಗಳ ಗಣ್ಯರು ಆಗಮಿಸಿ ಶುಭ ಕೋರಿದ್ದಾರೆ.
ಎಸ್.ಎಮ್.ಕೃಷ್ಣ ಅವರಿಗೆ ಶುಭಕೋರಿದ ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಎಸ್.ಎಂ.ಕೃಷ್ಣ ನನ್ನ ತಂದೆಯ ಸಮಾನ. ಅವರೊಂದಿಗೆ ಪ್ರತ್ಯೇಕ ರಹಸ್ಯ ಮಾತುಕತೆ ಏನೂ ಇಲ್ಲ. ನನ್ನದೇನಿದ್ದರೂ ತೆರೆದ ಪುಸ್ತಕವಿದ್ದಂತೆ. ಏನೇ ಇದ್ದರೂ ಬಹಿರಂಗವಾಗಿಯೇ ಮಾತನಾಡುತ್ತೇನೆ. ನಾನು ಯಾರಿಗೂ ಹೆದರುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಎಸ್ ಎಂ ಕೃಷ್ಣ ಜೊತೆ ನನ್ನ ಸಂಬಂಧ ಬಗ್ಗೆ ಯಾರೂ ಪ್ರಶ್ನೆ ಮಾಡಕ್ಕಾಗಲ್ಲ. ನನಗೆ ಅವರು ತಂದೆ ಸಮಾನ. ರಾಜಕೀಯವಾಗಿ ಮಾರ್ಗದರ್ಶನ ತೋರಿದವರು. ಪ್ರತೀ ವರ್ಷ ನಾನು ಅವರ ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇನೆ ಎಂದು ಹೇಳಿದರು.