ಬೆಂಗಳೂರು, ಮೇ 1 (Daijiworld News/MSP): ರಾಜಕೀಯದಲ್ಲಿ ಯಾರೂ ವಿರೋಧಿಗಳಲ್ಲ, ಸಿದ್ದಾಂತಗಳು ಬೇರೆ ಇರಬಹುದು ಅಷ್ಟೇ. ರಾಜಕೀಯ ವಿರೋಧಿಗಳು ಮುಂದೆ ಶತ್ರುಗಳಂತೆ ಹಿಂದೆ ಸ್ನೇಹಿತರಂತೆ ಎಂಬ ಆಡುಮಾತಿದೆ. ಈ ಮಾತು ಅಕ್ಷರಶಃ ನಿಜವಾಗಿದೆ. ಯಾಕೆಂದರೆ ಪ್ರತಿಪಕ್ಷಗಳನ್ನು ಜರಿದು ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಬುಧವಾರ ಸಚಿವ ಡಿ.ಕೆ.ಶಿವಕುಮಾರ್ ಅವರ ಕಾಲು ಹಿಡಿದು ಆಶೀರ್ವಾದ ಪಡೆದಿದ್ದಾರೆ. ಈ ವಿಚಾರ ಈಗ ರಾಜಕೀಯವಲಯದಲ್ಲಿ ಹೊಸ ಚರ್ಚೆ ನಾಂದಿಯಾಗಿದೆ.
ಮಾಜಿ ಮುಖ್ಯಮಂತ್ರಿ , ಬಿಜೆಪಿ ನಾಯಕರ ಎಸ್.ಎಂ.ಕೃಷ್ಣ ಅವರ 88 ನೇ ಜನ್ಮದಿನಾಚರಣೆಯ ಕಾರಣಕ್ಕೆ ಅವರಿಗೆ ಶುಭ ಕೋರಲೆಂದು ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ಈ ಇಬ್ಬರು ನಾಯಕರು ಆಗಮಿಸಿದ್ದರು. ಅಲ್ಲಿಗೆ ಮುಂಚಿತವಾಗಿ ಬಂದಿದ್ದ ಪ್ರತಾಪ್ ಸಿಂಹ ಅವರು ಸಚಿವ ಡಿ.ಕೆ ಶಿವಕುಮಾರ್ ಬರುತ್ತಿರುವುದನ್ನು ಕಂಡು ನಗುನಗುತ್ತಾ ತೆರಳಿ ಸ್ವಾಗತಿಸಿದ್ದು ಮಾತ್ರವಲ್ಲದೆ ಕಾಲಿಗೆ ಬಿದ್ದಿದ್ದಾರೆ. ಇದೇ ಸಂದರ್ಭ ಡಿ.ಕೆ ಶಿವಕುಮಾರ್ ಕೂಡ ನಗುನಗುತ್ತಲೇ ಪ್ರತಾಪ್ ಸಿಂಹ ಬೆನ್ನು ತಟ್ಟಿ ಆಶೀರ್ವದಿಸಿದ್ದಾರೆ.
ಈ ನಡುವೆ ಡಿ.ಕೆ ಶಿವಕುಮಾರ್ ಅವರು ರಾಜಕೀಯದಲ್ಲಿ ಹಿರಿಯ ನಾಯಕರು. ಹಿರಿಯರ ಕಾಲಿಗೆ ನಮಸ್ಕರಿಸಿದರೆ ಒಳ್ಳೆಯದು ಅದರಲ್ಲಿ ತಪ್ಪಿಲ್ಲ ಎಂದು ಪ್ರತಾಪ್ ಸಿಂಹ ತಮ್ಮ ಬೆಂಬಲಿಗರಲ್ಲಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.