ಮೈಸೂರು, ಏ 02(DaijiworldNews/AK): ರಾಜ್ಯದ ಜನರಿಗೆ ಬರ ಸಂಕಷ್ಟದಲ್ಲಿ ಸಹಾಯಕ್ಕೆ ಬರದ ಕೇಂದ್ರ ಸಚಿವ ಅಮಿತ್ ಶಾ ಅವರು, ರಾಜ್ಯದ ಜನರ ಬಳಿ ಮತ ಕೇಳಲು ಯಾವ ನೈತಿಕ ಹಕ್ಕಿದೆ. ಇಂತಹ ಬಿಜೆಪಿಯವರಿಗೆ ಜನರು ಮತ ನೀಡಬೇಕೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ರಾಜ್ಯದ ತೆರಿಗೆ ಹಣದಲ್ಲಿ ರಾಜ್ಯಕ್ಕೆ ಪಾಲು ನೀಡುತ್ತಿಲ್ಲ. ಆದರೆ ಮಾಜಿ ಮುಖ್ಯಮಂತ್ರಿ ಈ ಬಗ್ಗೆ ಚಕಾರವೆತ್ತದೇ, ಬಿಜೆಪಿಯ ವಕ್ತಾರರಾಗಿ ಬಿಟ್ಟಿದ್ದಾರೆ. ಕೇಂದ್ರದ ಈ ಧೋರಣೆ ಕನ್ನಡಿಗರಿಗೆ ಮಾಡುತ್ತಿರುವ ದ್ರೋಹ. ಬಿಜೆಪಿಯವರ ಈ ಧೋರಣೆಗೆ ರಾಜ್ಯದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹೈಲೆಪಲ್ ಕಮಿಟಿ ಅಧ್ಯಕ್ಷರಾಗಿರುವ ಅಮಿತ್ ಶಾ ಅವರು ಬರಪರಿಹಾರಕ್ಕೆ ಸಮ್ಮತಿ ಸೂಚಿಸಿಲ್ಲ. ಮೇಕೆದಾಟು ಯೋಜನೆ, ಮಹದಾಯಿ ಯೋಜನೆಗೂ ಇದುವರೆಗೆ ಅನುಮತಿ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಅಮಿತ್ ಶಾ ವಿರುದ್ಧ ನೀಡಿದ ಹೇಳಿಕೆಗಾಗಿ ಚುನಾವಣಾ ಆಯೋಗದಿಂದ ನೋಟೀಸ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಚುನಾವಣಾ ಆಯೋಗ ನೀಡಿರುವ ನೋಟೀಸ್ ಗೆ ಉತ್ತರ ನೀಡಲಾಗಿದೆ. ಸಿಬಿಐ ನವರು ನೀಡಿರುವ ವರದಿಯ ಮೇಲೆ ಅವರು ಹೇಳಿಕೆಯನ್ನು ನೀಡಿದ್ದು, ಈ ಬಗ್ಗೆ ಸ್ಪಷ್ಟೀಕರಣವನ್ನು ಈಗಾಗಲೇ ನೀಡಿದ್ದೇನೆ ಎಂದರು.
ವರುಣಾ ಕ್ಷೇತ್ರದ ಮುಖ್ಯಮಂತ್ರಿಗಳ ನಿನ್ನೆಯ ಪ್ರಚಾರ ಭಾಷಣದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಜ್ಯದಲ್ಲಿ ಜನಪರ ಯೋಜನೆಗಳು ,ಅಭಿವೃದ್ಧಿ ಕಾರ್ಯಗಳು ಮುಂದುವರೆಯಬೇಕಾದರೆ ನಮ್ಮ ಸರ್ಕಾರವೇ ಅಸ್ತಿತ್ವದಲ್ಲಿರಬೇಕು. ಬಿಜೆಪಿಯವರು ಅಧಿಕಾರಕ್ಕೆ ಬಂದಲ್ಲಿ, ಜನಪರ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಜನರಿಗೆ ಮನವರಿಕೆ ಮಾಡಿಸಿದ್ದೇನೆ. ಬಿಜೆಪಿಯವರು ಕೇವಲ ಸುಳ್ಳು ಹೇಳುತ್ತಿದ್ದಾರೆ.ಕಾಂಗ್ರೆಸ್ ಸರ್ಕಾರ ಮಾಡಿರುವ ಸಾಧನೆಗಳ ಆಧಾರದ ಮೇಲೆ ಮತ ಕೇಳುತ್ತಿದ್ದು, ಜನ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂಬ ಭರವಸೆಯಿದೆ ಎಂದರು.
ಮಂಡ್ಯದಲ್ಲಿ ಕುಮಾರಸ್ವಾಮಿಯವರು ಚುನಾವಣೆ ಎದುರಿಸುತ್ತಿರುವುದು ದೈವೇಚ್ಛೆ ಎಂದ ಬಗ್ಗೆ ಪ್ರತಿಕ್ರಿಯೆ ನೀಡಿ, ಹಿಂದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಅವರ ಮಗನನ್ನು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಲ್ಲಿಸಿ ಸೋಲನ್ನು ಅನುಭವಿಸಿದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾನು ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡಿದ್ದರಿಂದ ಅವರು ಹಾಸನದಲ್ಲಿ ಗೆಲುವನ್ನು ಸಾಧಿಸಿದರು. ಈ ಬಾರಿ ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕೆಂದು ಕಾರ್ಯಪ್ರವೃತ್ತರಾಗಿದ್ದು, ಹಾಸನದ ಜನತೆ ಕಾಂಗ್ರೆಸ್ ಪಕ್ಷದತ್ತ ಒಲವು ತೋರಿದ್ದಾರೆ ಎಂದರು.
ವರುಣಾ ಜನರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಬೇಕೆಂದು ಬಯಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಾರಿಯ ನನ್ನ ಸರ್ಕಾರದ ಅವಧಿಯೇ ನಾಲ್ಕು ವರ್ಷವಿದೆ. ನನ್ನ 82 ನೇಯ ವಯಸ್ಸಿಗೆ ನನ್ನ ರಾಜಕೀಯ ಜೀವನಕ್ಕೆ 50 ವರ್ಷವಾಗುತ್ತದೆ. ಚುನಾವಣೆಯ ಬಗ್ಗೆ ಯಾವುದೇ ರೀತಿಯ ಆತಂಕವಿಲ್ಲ ಎಂದರು.