ಹಾಸನ,ಮೇ 1 (Daijiworld News/MSP): ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಕಳೆದ ಹಲವು ವರ್ಷಗಳಿಂದ ಪ್ರಥಮ ದ್ವಿತೀಯ ಬರುತ್ತಿದ್ದ ಕರಾವಳಿಯ ಅವಿಭಜಿತ ಜಿಲ್ಲೆ ಈ ಬಾರಿ 5 ನೇ ಹಾಗೂ 7 ನೇ ಸ್ಥಾನ ಪಡೆಯುವ ಮೂಲಕ ಭಾರಿ ಹಿನ್ನಡೆ ಅನುಭವಿಸಿದೆ. ಆದರೆ ಇದೇ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡಿರುವ ಎಚ್ ಡಿ ರೇವಣ್ಣ ದಕ್ಷಿಣ ಕನ್ನಡ ಫಲಿತಾಂಶದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಹಾಸನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, "ದಕ್ಷಿಣ ಕನ್ನಡ ಜಿಲ್ಲೆಗೆ ಬಾರತೀಯ ಜನತಾ ಪಾರ್ಟಿಗೆ ಮತ ಹಾಕಿರುವುದರಿಂದ ಈ ಬಾರಿ ಕರಾವಳಿ ಜಿಲ್ಲೆ ಫಲಿತಾಂಶದಲ್ಲಿ 5ನೇ ಸ್ಥಾನಕ್ಕೆ ಬಂದಿದೆ. ಒಂದು ವೇಳೆ ಅಲ್ಲಿ ಜೆಡಿಎಸ್ ಗೆ ಮತ ಹಾಕುತ್ತಿದ್ದರೆ ದ.ಕಕ್ಕೆ ಪ್ರಥಮ ಸ್ಥಾನ ಬರುತಿತ್ತು ಎಂದು ಗೇಲಿ ಮಾಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಈಗ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುವುದಿಲ್ಲ ಎನ್ನುವುದಕ್ಕೆ ಈ ಬಾರಿಯ ರಿಸಲ್ಟ್ ಸಾಕ್ಷಿಯಾಗಿದೆ " ಎಂದು ಹೇಳಿದರು.
ಜೆಡಿಎಸ್ ಗೆ ಮತ್ತು ಹಾಸನ ಜಿಲ್ಲೆಗೆ ದೇವರ ಅನುಗ್ರಹವಿದೆ ಮಾತ್ರವಲ್ಲದೆ ನಮ್ಮ ಜಿಲ್ಲೆ ಪ್ರಥಮ ಸ್ಥಾನ ಪಡೆಯಲು ಸರ್ಕಾರದ ನೀತಿಗಳು ಕೂಡಾ ಕಾರಣವಾಗಿದೆ. ಮಾತ್ರವಲ್ಲದೆ ನನ್ನ ಪತ್ನಿ, ಜಿಲ್ಲಾ ಪಂಚಾಯಿತಿ ಶಿಕ್ಷಣಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ಪ್ರಯತ್ನ ಕೂಡ ಸಫಲವಾಗಿದೆ. ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ದೇವೇಗೌಡರ ಕೊಡುಗೆಯೂ ಇದೆ. ಅವರು ಕೂಡ ಮಾರ್ಗದರ್ಶನ ನೀಡಿದ್ದಾರೆ. ಹೀಗಾಗಿ ಜಿಲ್ಲೆ ಶಿಕ್ಷಣದಲ್ಲಿ ಪ್ರಥಮ ಸ್ಥಾನಕ್ಕೆ ಬಂದಿದೆ ಎಂದರು